ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್; ಶೀಘ್ರದಲ್ಲೆ ಪರಿಣಾಮಕಾರಿ ಕಾಯ್ದೆ ಜಾರಿ: ಆರೋಗ್ಯ ಸಚಿವ ರಮೇಶ್ ಕುಮಾರ್

ಬೆಂಗಳೂರು, ಮಾ. 15: ಚಿಕಿತ್ಸೆ ನೆಪದಲ್ಲಿ ಜನ ಸಾಮಾನ್ಯರಿಂದ ಹಣ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕಾಯ್ದೆಯಿಲ್ಲ. ಹೀಗಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜೀತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿ ಶಿಫಾರಸ್ಸು ಆಧರಿಸಿ ಶೀಘ್ರದಲ್ಲೆ ಪರಿಣಾಮಕಾರಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಜನರನ್ನು ಶೋಷಿಸಿ, ದೋಚುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಂಡರು.
ಖಾಸಗಿ ಆಸ್ಪತ್ರೆಗಳಿಗೆ ಪರ್ಯಾಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಹೆಚ್ಚಳ, ವೈದ್ಯರು-ಸಿಬ್ಬಂದಿ ನೇಮಕ ಹಾಗೂ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗಿದೆ. ಅಲ್ಲದೆ, ಆಧುನಿಕ ಉಪಕರಣಗಳನ್ನು ಒದಗಿಸುವ ಮೂಲಕ ಸರಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
2007ರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು. ಆ ಮೂಲಕ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ರಮೇಶ್ ಕುಮಾರ್ ಇದೇ ವೇಳೆ ತಿಳಿಸಿದರು.
ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ವಿರೋಧಿ ಖಂಡಿತ ಅಲ್ಲ. ಜನಪರ ನಿಲುವು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವ ಅತ್ಯಮೂಲ್ಯ. ಜನ ಸಾಮಾನ್ಯರ ಜೀವ ರಕ್ಷಣಗೆ ಎಲ್ಲರ ಆದ್ಯತೆ. ಸರಕಾರ ತನ್ನ ಜವಾಬ್ದಾರಿಯಿಂದ ಯಾವುದೇ ಕಾರಣಕ್ಕೂ ನುಣುಚಿಕೊಳ್ಳುವುದಿಲ್ಲ ಎಂದು ಅವರು ಅಭಯ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಕೆ.ಎಸ್.ಪುಟ್ಟಣ್ಣಯ್ಯ, ಖಾಸಗಿ ಆಸ್ಪತ್ರೆಗಳಿಗೆ ಸಣ್ಣ ಚಿಕಿತ್ಸೆಗಾಗಿ ಹೋದರೂ 8 ಲಕ್ಷ ರೂ.ಗಳಿಂದ 15-20 ಲಕ್ಷ ರೂ.ಬಿಲ್ ಮಾಡ್ತಾರೆ. ಇವರ ನಿಯಂತ್ರಣಕ್ಕೆ ಯಾವುದೇ ಕಾನೂನು ಇಲ್ಲವೇ? ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಸರಕಾರ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಸಕ್ಕರೆ ಕಾಯಿಲೆ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಚಿಕಿತ್ಸೆ ಕೊಡಿಸುವುದರ ಜೊತೆಗೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಸರಕಾರ ಆದ್ಯತೆ ನೀಡಬೇಕು. ಸಂಚಾರಿ(ಮೊಬೈಲ್) ಆಸ್ಪತ್ರೆ ಘಟಕ ಆರಂಭಿಸಬೇಕು. ಅಲ್ಲದೆ, ಸರಕಾರಿ ಆಸ್ಪತ್ರೆಗಳ ಸ್ವಚ್ಛತೆ ಕಾಪಾಡಲು ಆಸ್ಥೆ ವಹಿಸಬೇಕು ಅವರು ಎಂದು ಸಲಹೆ ನೀಡಿದರು.
ಖಾಸಗಿ ಆಸ್ಪತ್ರೆಗಳೆಂಬ ಕಸಾಯಿಖಾನೆ
ಖಾಸಗಿ ಆಸ್ಪತ್ರೆಗಳು ಜನರ ಪಾಲಿಗೆ ‘ಕಸಾಯಿಖಾನೆ’ಗಳಾಗಿದ್ದು, ಚಿಕಿತ್ಸೆ ನೆಪದಲ್ಲಿ ಸುಲಿಗೆ ಮಾಡುತ್ತಿವೆ. ಕ್ಷೌರದ ಅಂಗಡಿಗಳಲ್ಲಿ ಕೂದಲು ಕತ್ತರಿಸಲು, ತಲೆ-ಗಡ್ಡ ಬೋಳಿಸಲು ದರ ಪಟ್ಟಿ ಹಾಕಿರುತ್ತಾರೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಕೈ ಮುಟ್ಟಿದರೆ 500ರೂ.ಕೊಡಬೇಕು. ನಮ್ಮ ಕೈ ಮುಟ್ಟಿದರೆ ಅವರಿಗೆ ವಿದ್ಯುತ್ ಶಾಕ್ ಆಗುತ್ತದೆಯೇ.
-ಕೆ.ಎಸ್.ಪುಟ್ಟಣ್ಣಯ್ಯ ಮೇಲುಕೋಟೆ ಶಾಸಕ
ಆಡಳಿತ ಸುಧಾರಣೆಗಾಗಿ ಜಾರಿಗೆ ತರುವ ನಿಯಮಗಳು ಕೆಲವೊಮ್ಮೆ ದುರ್ಬಳಕೆ ಆಗುತ್ತಿವೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿ ಶೋಷಣೆ ತಪ್ಪಿಸಲು ತಾನೆ ಖುದ್ದಾಗಿ ಕೆಲ ಕಡೆಗಳನ್ನು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಿನಗೂಲಿ ನೌಕರರಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಲಾಗಿದೆ.
-ಕೆ.ಆರ್.ರಮೇಶ್‌ಕುಮಾರ್ ಆರೋಗ್ಯ ಸಚಿವ







