ಏಡ್ಸ್ ವೈರಸ್‌ಗಳ ಅಡಗುದಾಣ ಪತ್ತೆ ಹಚ್ಚಿದ ವಿಜ್ಞಾನಿಗಳು : ಸಂಪೂರ್ಣ ಚಿಕಿತ್ಸೆಯ ಸಾಧ್ಯತೆಗೆ ಮರುಜೀವ

ಪ್ಯಾರಿಸ್ (ಫ್ರಾನ್ಸ್), ಮಾ. 16: ಎಚ್‌ಐವಿ ನಿರೋಧಕ ಔಷಧಿ ಸೇವಿಸುತ್ತಿರುವ ಜನರಲ್ಲಿ ಏಡ್ಸ್ ವೈರಸ್‌ಗಳಿಗೆ ‘ಅಡಗುದಾಣ’ ಕಲ್ಪಿಸುವ ನಿಗೂಢ ಬಿಳಿ ರಕ್ತ ಕಣಗಳನ್ನು ಪತ್ತೆಹಚ್ಚುವ ವಿಧಾನವೊಂದನ್ನು ಕಂಡುಹಿಡಿದಿರುವುದಾಗಿ ಫ್ರಾನ್ಸ್ ವಿಜ್ಞಾನಿಗಳು ಬುಧವಾರ ಹೇಳಿದ್ದಾರೆ.ಈ ‘ಆಶ್ರಯದಾತ’ ರಕ್ತಕಣಗಳ ಸ್ಥಳವನ್ನು ಗುರುತಿಸಲು ಸಾಧ್ಯವಾಗಿದ್ದು, ಒಂದು ದಿನ ಅವುಗಳನ್ನು ನಾಶಪಡಿಸಲು ಸಾಧ್ಯವಾಗುತ್ತದೆ.
ಏಡ್ಸ್ ಮತ್ತು ಅದಕ್ಕೆ ಕಾರಣವಾಗುವ ಹ್ಯೂಮನ್ ಇಮ್ಯುನೊಡೆಫಿಶಿಯನ್ಸಿ ವೈರಸ್ (ಎಚ್‌ಐವಿ)ನ್ನು ತೊಡೆದುಹಾಕುವ ನಿಟ್ಟಿನಲ್ಲಿ ಈ ಬಿಳಿ ರಕ್ತಕಣಗಳು ಈವರೆಗೆ ತಡೆಯಾಗಿದ್ದವು.‘‘ಈ ಸಂಶೋಧನೆಯು ವೈರಸ್‌ಗಳ ಅಡಗುದಾಣಗಳನ್ನು ಹೆಚ್ಚಾಗಿ ಅರ್ಥ ಮಾಡಿಕೊಳ್ಳಲು ನೆರವು ನೀಡುತ್ತದೆ’’ ಎಂದು ಫ್ರಾನ್ಸ್‌ನ ಸಿಎನ್‌ಆರ್‌ಎಸ್ ಸಂಶೋಧನಾ ಸಂಸ್ಥೆ ಹೇಳಿದೆ.
ಈ ಸಂಸ್ಥೆಯು ಪಾಲ್ಗೊಂಡ ಅಧ್ಯಯನ ವರದಿಯು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.ಎಚ್‌ಐವಿಗೆ ಚಿಕಿತ್ಸೆಯಿಲ್ಲ ಹಾಗೂ ಸೋಂಕು ತಗಲಿದ ವ್ಯಕ್ತಿಗಳು ವೈರಸ್ ಹತ್ತಿಕ್ಕುವ ಔಷಧಿಗಳನ್ನು ಜೀವಮಾನ ಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆ.ಔಷಧಕ್ಕೆ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ಕೆಲವೇ ಕೆಲವು ಕೋಶಗಳು ವೈರಸ್‌ಗಳಿಗೆ ಆಶ್ರಯ ನೀಡುವುದು ಇದಕ್ಕೆ ಕಾರಣ.
ಒಂದು ವೇಳೆ ಚಿಕಿತ್ಸೆ ನಿಲ್ಲಿಸಿದರೆ, ಈ ವೈರಸ್‌ಗಳು ಮತ್ತೆ ಚಿಗಿತುಕೊಂಡು ಹರಡಲು ಈ ಕೋಶಗಳು ಸಹಾಯ ಮಾಡುತ್ತವೆ. ದಶಕಗಳ ಬಳಿಕವೂ ಇದು ಸಂಭವಿಸುವ ಸಾಧ್ಯತೆಯಿರುತ್ತದೆ.







