ಕರ್ನಾಟಕ ಬಜೆಟ್-2017-18: ಸರಕಾರಕ್ಕೆ ಬ್ಯಾರಿ ಸಾಹಿತ್ಯ ಅಕಾಡಮಿ ಅಭಿನಂದನೆ
ಮಂಗಳೂರು, ಮಾ.16: ಬ್ಯಾರಿ ಭಾಷಿಗರ ಹಲವಾರು ವರ್ಷಗಳ ಪ್ರಯತ್ನದ ಫಲವಾಗಿ ಕರ್ನಾಟಕದ ಘನ ಸರ್ಕಾರವು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿದೆ.
ಹಾಗೆಯೇ ಬ್ಯಾರಿ ಭಾಷೆ, ಕಲೆ, ಸಂಸ್ಕೃತಿಯ ಅಧ್ಯಯನಕ್ಕಾಗಿ ಹಾಗೂ ಪ್ರಸಾರಕ್ಕಾಗಿ ಬ್ಯಾರಿಗಳು ಅತೀ ಹೆಚ್ಚು ಜನಸಂಖ್ಯೆಯಲ್ಲಿರುವ ಪ್ರದೇಶವಾದ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳಗಂಗೋತ್ರಿ)ದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನಿಯೋಗವು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದುದನ್ನು ಪರಿಗಣಿಸಿ, ಜಿಲ್ಲಾ ಸಚಿವರುಗಳು, ಶಾಸಕರ ಹಕ್ಕೊತ್ತಾಯವನ್ನು ಕೂಡಾ ಪರಿಗಣಿಸಿ ಸನ್ಮಾನ್ಯ ಮುಖ್ಯಮಂತ್ರಿಯವರು 2017ರ ಬಜೆಟ್‌ನಲ್ಲಿ ಬ್ಯಾರಿ ಅಧ್ಯಯನ ಪೀಠದ ಸ್ಥಾಪನೆಯನ್ನು ಘೋಷಿಸಿರುತ್ತಾರೆ.
ಇದಕ್ಕೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಮಸ್ತ ಬ್ಯಾರಿ ಭಾಷಿಗರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಘನ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದೆ. ಹಾಗೆಯೇ ಈ ಅಧ್ಯಯನ ಪೀಠದಿಂದಾಗಿ ಬ್ಯಾರಿ ಭಾಷೆ, ಕಲೆ, ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅಧ್ಯಯನ ಕೆಲಸಗಳು ಆಗುವಂತೆ ಎಲ್ಲರೂ ಕೈ ಜೋಡಿಸಬೇಕೆಂದು ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.





