ಉಪಮುಖ್ಯಮಂತ್ರಿ ಹುದ್ದೆ ಗಗನ ಕುಸುಮ..? : ನವಜೋತ್ ಸಿದ್ದುಗೆ ಮುಖಭಂಗ

ಚಂಡೀಗಡ, ಮಾ.16: ಪಂಜಾಬ್‌ನಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ಮುಂದಿನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಪಡೆಯುವ ಕನಸು ಕಾಣುತ್ತಿದ್ದ ನವಜೋತ್ ಸಿಂಗ್ ಸಿದ್ದುಗೆ ಭಾರೀ ಮುಖಭಂಗವಾಗಿದೆ.
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಚಿಸಿದ ಸಚಿವ ಸಂಪುಟದಲ್ಲಿ ಸಿದ್ದುಗೆ ಅಷ್ಟೇನೂ ಪ್ರಮುಖವಲ್ಲದ - ಸ್ಥಳೀಯ ಸಂಸ್ಥೆಗಳ ಖಾತೆಯನ್ನು ನೀಡಿ ಕೈ ಒರೆಸಿಕೊಳ್ಳಲಾಗಿದೆ.
ಬಿಜೆಪಿಯಲ್ಲಿದ್ದ ನವಜೋತ್ ಸಿಂಗ್ ಸಿದ್ದು ಚುನಾವಣೆ ಘೋಷಣೆಯಾದಾಗ ರಾಜಿನಾಮೆ ನೀಡಿ ಆಮ್ ಆದ್ಮಿ ಪಕ್ಷದ ಬಾಗಿಲು ತಟ್ಟಿದ್ದರು. ಪಂಜಾಬ್‌ನಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಇದಕ್ಕೆ ಆಮ್ ಆದ್ಮಿ ಪಕ್ಷ ಒಪ್ಪದಿದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಕಾಂಗ್ರೆಸ್ ಗೆದ್ದರೆ ತಮ್ಮನ್ನು ಉಪಮುಖ್ಯಮಂತ್ರಿ ಹುದ್ದೆಗೆ ನೇಮಿಸಬೇಕು ಎಂಬುದು ಅವರ ಷರತ್ತಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಗೆದ್ದು ಸರಕಾರ ರಚಿಸಿಯೂ ಆಗಿದೆ. ಆದರೆ ‘ನಿನ್ನೆ-ಮೊನ್ನೆ’ಯಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸಿದ್ದುಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಪಕ್ಷದಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿದ್ದು ಇಬ್ಬರೂ ಪಟಿಯಾಲದವರು ಮತ್ತು ಒಂದೇ ಸಮುದಾಯದವರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ- ಈ ಎರಡೂ ಉನ್ನತ ಹುದ್ದೆಗಳಿಗೂ ಒಂದೇ ಸಮುದಾಯದ ವ್ಯಕ್ತಿಗಳು ಆಯ್ಕೆಯಾಗುವುದು ಸರಿಯಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ್ತು ಹಿಂದೂಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿದ್ದು ಈ ಸಮುದಾಯದ ಪ್ರತಿನಿಧಿಗಳಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕಬೇಕು ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.







