ಮೂಡುಬಿದಿರೆ ತಾಲೂಕು ರಚನೆ: ಮಾಜಿ ಶಾಸಕ ದಿ. ಧರ್ಮ ಸಾಮ್ರಾಜ್ಯರವರ ಪ್ರತಿಮೆಗೆ ಮಾಲಾರ್ಪಣೆ
.jpg)
ಮೂಡುಬಿದಿರೆ, ಮಾ.16: ಮೂಡುಬಿದಿರೆ ತಾಲೂಕು ಘೋಷಣೆಯಾದ ಸಂಭ್ರಮವನ್ನು ನೂತನ ತಾಲೂಕಿನ ಶಿರ್ತಾಡಿಯಲ್ಲಿರುವ ಮಾಜಿ ಶಾಸಕ ದಿವಂಗತ ಧರ್ಮ ಸಾಮ್ರಾಜ್ಯ ಅವರ ಪ್ರತಿಮೆಗೆ ಶಾಸಕ ಅಭಯಚಂದ್ರ ಅವರು ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, 54 ವರ್ಷಗಳ ಹಿಂದೆ ಧರ್ಮ ಸಾಮ್ರಾಜ್ಯ ಅವರು ಆರಂಭಿಸಿದ್ದ ತಾಲೂಕು ರಚನೆ ಹೋರಾಟಕ್ಕೆ ಕಡೆಗೂ ಸಿದ್ದರಾಮಯ್ಯ ಅವರು ಮಾನ್ಯತೆ ನೀಡಿ ಜನತೆಯ ಭಾವನೆಗಳಿಗೆ ಸ್ಪಂದಿಸಿದ್ದಾರೆ. ನಿರಂತರ ಹೋರಾಟಕ್ಕೆ ಸಿಕ್ಕ ಜಯ ಇದಾಗಿದ್ದು, 2 ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಹಾಗೂ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಜನತೆ ವಹಿಸಿದ್ದ ಅತಿದೊಡ್ಡ ಜವಾಬ್ದಾರಿಯನ್ನು ಪೂರೈಸಿದ್ದೇನೆ ಎಂದರು.
ಅಧಿವೇಶನ ಮುಗಿದ ಕೂಡಲೇ ಕಂದಾಯ ಸಚಿವರನ್ನು ಮೂಡುಬಿದಿರೆಗೆ ಕರೆಸಿ ನೂತನ ಮಿನಿ ವಿಧಾನ ಸೌಧಕ್ಕೆ ಶಿಲಾನ್ಯಾಸ ಏರ್ಪಡಿಸುವ ಮೂಲಕ ತಾಲೂಕು ರಚನೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈಗಿನ ನ್ಯಾಯಾಲಯ ಸಂಕೀರ್ಣ ಹಾಗೂ ನಾಡಕಚೇರಿ ಇರುವ ಪ್ರದೇಶದಕ್ಕೆ ಹೊಂದಿಕೊಂಡಿರುವ ಪ್ರವಾಸಿ ಕುಟೀರ ಉಪಯೋಗವಿಲ್ಲದೇ ಪಾಳು ಬಿದ್ದಿದ್ದು ಅಲ್ಲಿರುವ 1.5 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಯಿಂದ ಪಡೆದು ಅಲ್ಲಿಯೇ ಮಿನಿ ವಿಧಾನ ಸೌಧ ರಚಿಸಲಾಗುವುದು. ಈ ಹಿಂದೆ ನ್ಯಾಯಾಲಯವನ್ನು ಕಡಲಕೆರೆಯಲ್ಲಿ ನಿರ್ಮಾಣ ಮಾಡುವ ಕ್ರಮವನ್ನು ನಾನು ತಡೆದು ಅದನ್ನು ಜನತೆಗೆ ಉಪಯೋಗವಾಗುವಂತೆ ಪೇಟೆಯ ಹತ್ತಿರದಲ್ಲೇ ನಿರ್ಮಾಣ ಮಾಡುವಂತೆ ಕೇಳಿಕೊಂಡಿದ್ದೆ. ಅದಕ್ಕಾಗಿ ಒಂದು ತಿಂಗಳೊಳಗೆ ಜಾಗವನ್ನು ಮೀಸಲಿರಿಸಿಕೊಟ್ಟಿದ್ದೇನೆ. ಇದೀಗ ಅಲ್ಲಿಯೇ ತಾಲೂಕಾಡಳಿತದ ಎಲ್ಲಾ ವ್ಯವಸ್ಥೆಗಳು ಒಳಗೊಂಡ ಸಂಕೀರ್ಣ ನಿರ್ಮಾಣವಾಗುತ್ತದೆ. ತಾಲೂಕು ರಚನೆಗಾಗಿ ನಿರಂತರವಾಗಿ ಶ್ರಮಿಸಿದ ದಿ. ಧರ್ಮಸಾಮ್ರಾಜ್ಯ ಅವರಿಗೂ ಹಾಗೂ ಇತರ ಹಿರಿಯರಿಗೂ ಈ ಕೀರ್ತಿ ಸಲ್ಲುತ್ತದೆ ಎಂದರು.
ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಧನಂಜಯ ಮೂಡುಬಿದಿರೆ ಧರ್ಮ ಸಾಮ್ರಾಜ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೂಡುಬಿದಿರೆ ಎರಡು ವರ್ಷಗಳ ವರೆಗೆ ತಾಲೂಕಾಗಿ ಇದ್ದದ್ದು ಅದರ ಪಳಯುಳಿಕೆಯಾಗಿ ಉಳಿದಿರುವ ಈಗಿನ ರಿಜಿಸ್ಟ್ರಾರ್ ಕಚೇರಿಯಲ್ಲಿರುವ ಕುರುಹುಗಳನ್ನು ವಿವರಿಸಿ, ತಾಲೂಕಿಗಾಗಿ ಹೋರಾಡಿದ ಹಿರಿಯ ಚೇತನಗಳಿಗೆ ಧನ್ಯವಾದ ಅರ್ಪಿಸಿದರು.
ದಿ. ಧರ್ಮ ಸಾಮ್ರಾಜ್ಯ ಅವರ ಪುತ್ರರಾದ ಎಸ್.ಡಿ. ಸಂಪತ್ ಸಾಮ್ರಾಜ್ಯ, ಸುಶಾಂತ್ ಸಾಮ್ರಾಜ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಪಿಕೆ ಥೋಮಸ್, ದಲಿತ ಮುಖಂಡ ಶಿವಾನಂದ ಎಸ್. ಪಾಂಡ್ರು, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ನೆಲ್ಲಿಕಾರು ಗ್ರಾ.ಪಂ. ಸದಸ್ಯ ಶಶಿಧರ, ದರೆಗುಡ್ಡೆ ಗ್ರಾ.ಪಂ. ಸದಸ್ಯ ಸುಭಾಸ್ ಚೌಟ, ವಾಲ್ಪಾಡಿ ಗ್ರಾ.ಪಂ. ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಶಿರ್ತಾಡಿ ಗ್ರಾ.ಪಂ. ಸದಸ್ಯ ಪ್ರವೀಣ್ ಕುಮಾರ್ ಜೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಉದ್ಯಮಿ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.







