ಜಾತ್ರೆಯಲ್ಲಿ ಜೂಜಾಡುತ್ತಿದ್ದ 16 ಮಂದಿಯ ಬಂಧನ

ಮಡಿಕೇರಿ ಮಾ.16: ಕೊಡಗು-ಕೇರಳ ಗಡಿಭಾಗವಾದ ಮಾಕುಟ್ಟ ಸಮೀಪ ಜಾತ್ರೆಯೊಂದರ ಸಂದರ್ಭ ಜೂಜಾಟದಲ್ಲಿ ತೊಡಗಿದ್ದ ಸುಮಾರು 16 ಮಂದಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ, ಆರೋಪಿಗಳಿಂದ 56 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಗಡಿಭಾಗವಾದ ಮಾಕುಟ್ಟ ಬಳಿಯ ಕಾಕೆಮಾನಿ ಭಗವತಿ ದೇವಾಲಯದ ಜಾತ್ರೆ ಬುಧವಾರದಿಂದ ಆರಂಭವಾಗಿದ್ದು, ಇನ್ನೂ ಮೂರು ದಿನಗಳ ಕಾಲ ನಡೆಯಲಿದೆ. ಈ ಜಾತ್ರೆಯಲ್ಲಿ ಭಾರೀ ಪ್ರಮಾಣದ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬುಧವಾರ ಮಧ್ಯರಾತ್ರಿ ದಾಳಿ ನಡೆಸಿದ ಅಪರಾಧ ಪತ್ತೆದಳದ ಸಿಬ್ಬಂದಿಗಳು 16 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂಜಾಟದಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು, ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದುದರಿಂದ ಹೆಚ್ಚಿನ ಆರೋಪಿಗಳು ಕಾಡಿನೊಳಗೆ ನುಗ್ಗಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೂ ರಾತ್ರಿ ವೇಳೆ ಸಾಹಸದಿಂದ 16 ಮಂದಿಯನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ 56ಸಾವಿರ ರೂ.ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳೆಲ್ಲರೂ ನೆರೆಯ ಕೇರಳ ರಾಜ್ಯದವರೆನ್ನಲಾಗಿದ್ದು, ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಮಹೇಶ್, ಸಿಬ್ಬಂದಿಗಳಾದ ಹಮೀದ್, ತಮ್ಮಯ್ಯ, ಅನಿಲ್, ವೆಂಕಟೇಶ್, ವಸಂತ್, ನಿರಂಜನ್, ಯೋಗೀಶ್, ಗಣೇಶ್, ಶೇಷಪ್ಪ, ಶಶಿಧರ್ ಭಾಗವಹಿಸಿದ್ದರು.







