ಉಳ್ಳಾಲ ಜುಮಾ ನಮಾಝ್ ವಿವಾದ: ಆರೋಪಿಗೆ ಹೈಕೋರ್ಟ್ ಜಾಮೀನು
ಮಂಗಳೂರು, ಮಾ.16: ಉಳ್ಳಾಲದ ದರ್ಗಾ ಸಮೀಪದ ಮಸೀದಿ ಮತ್ತು ಉಳ್ಳಾಲ ಮೇಲಂಗಡಿ ಹೊಸಪಳ್ಳಿಯ ಜುಮಾ ನಮಾಝ್ ಮಾಡುವ ವಿಷಯದಲ್ಲಿ ಉಂಟಾಗಿದ್ದ ಹಲ್ಲೆ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ಉಳ್ಳಾಲ ಆಝಾದ್ ನಗರದ ಇಮ್ತಿಯಾಝ್ (31)ಗೆ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ3ನೆ ಆರೋಪಿ ಇಮ್ತಿಯಾಝ್‌ಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಇಮ್ತಿಯಾಝ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಬುಧವಾರ ಆರೋಪಿಗೆ ಜಾಮೀನು ನೀಡಿದ್ದು, ಇಂದು ಬಿಡುಗಡೆಗೊಳಿಸಲಾಗಿದೆ.
ಉಳ್ಳಾಲದ ದರ್ಗಾ ಸಮೀಪದ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವಿಚಾರದಲ್ಲಿ ವಿವಾದ ಉಂಟಾದ ಕಾರಣ ಒಂದು ಗುಂಪು ಉಳ್ಳಾಲ ಮೇಲಂಗಡಿಯ ಹೊಸಪಳ್ಳಿಯಲ್ಲಿ ಪ್ರಾರ್ಥನೆ ಮಾಡಲು ನಿರ್ಧರಿಸಿತ್ತು. ಅದರಂತೆ ಮಂಗಳೂರು ಖಾಝಿ ನೇತೃತ್ವದಲ್ಲಿ ಮೇಲಂಗಡಿಯ ಅಬ್ದುಲ್ ಸವಾದ್, ಉಳ್ಳಾಲ ಅಲೇಕಳದ ಸಂಶುದ್ದೀನ್ ಸಹಿತ ಒಂದು ತಂಡ 2013 ಅ.18ರಂದು ಮಧ್ಯಾಹ್ನ 12.20ರ ಸುಮಾರಿಗೆ ಮೊದಲ ಬಾರಿಗೆ ಪ್ರಾರ್ಥನೆ ಮಾಡಲು ತಯಾರಿ ನಡೆಸಿತ್ತು.
ಈ ಸಂದರ್ಭದಲ್ಲಿ ವಿರೋಧಿ ತಂಡದ ಇಮ್ತಿಯಾಝ್ ಮತ್ತು ಇತರ 8 ಮಂದಿಯ ತಂಡ ಮೇಲಂಗಡಿಯ ಹೊಸಪಳ್ಳಿ ಮಸೀದಿ ಒಳಗಡೆ ಅಕ್ರಮ ಪ್ರವೇಶ ಮಾಡಿ ಸವಾದ್ ಮತ್ತು ಸಂಶುದ್ದೀನ್ ಅವರಿಗೆ ಗಂಭೀರವಾಗಿ ಇರಿದು ಕೊಲೆಗೆ ಯತ್ನಿಸಿತ್ತು ಎಂದು ಆರೋಪಿಸಲಾಗಿತ್ತು.
ಆರೋಪಿಯ ಪರವಾಗಿ ಬಿ.ವಿ.ಆಚಾರ್ಯ ಮತ್ತು ಶಾಕಿರ್ ಅಬ್ಬಾಸ್ ವಾದಿಸಿದ್ದರು.







