ಕುಂದಾಪುರ: ಗರೋಡಿ ಗುರಿಕಾರರ ಸಮಾಲೋಚನಾ ಸಭೆ

ಕುಂದಾಪುರ, ಮಾ.16: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಶ್ರಯದಲ್ಲಿ ಎ.23ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಪೂರ್ವಭಾವಿಯಾಗಿ ಕುಂದಾಪುರ ತಾಲೂಕು ವ್ಯಾಪ್ತಿಯ ಗರೋಡಿಗಳ ಗುರಿಕಾರರ ಸಮಾಲೋಚನಾ ಸಭೆ ಇತ್ತೀಚೆಗೆ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಔಚಿತ್ಯ ಹಾಗೂ ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕುಂದಾಪುರ ತಾಲೂಕು ವ್ಯಾಪ್ತಿಯ ವಿವಿಧ ಗರೋಡಿಗಳ ಗುರಿಕಾರರು ಹಾಗೂ ಅರ್ಚಕರು ಸಲಹೆ-ಸೂಚನೆಗಳನ್ನು ನೀಡಿದರು. ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಮಂಜು ಬಿಲ್ಲವ, ಜಿಲ್ಲಾ ಬಿಲ್ಲವ ಯುವ ವೇದಿಕೆ ಗೌರವ ಸಲಹೆಗಾರ ರಾಜು ಪೂಜಾರಿ ಉಪ್ಪೂರು,ಕುಂದಾಪುರ ವಲಯ ಸಂಚಾಲಕ ಅರುಣ್ ಕುಮಾರ್ ಶೀರೂರು, ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮಲ್ಪೆ, ಸಂಘಟನಾ ಕಾರ್ಯದರ್ಶಿ ಶರತ್ ಜತ್ತನ್ ಕಲ್ಯಾಣಪುರ ಇತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ ಸ್ವಾಗತಿಸಿದರು. ಗೌರವ ಸಲಹೆಗಾರ ಎ.ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷ ದಿವಾಕರ್ ಸನಿಲ್ ಮಲ್ಪೆ ವಂದಿಸಿದರು.







