ಝಾಕಿರ್ ನಾಯ್ಕ್ ರ ಸಂಸ್ಥೆಯ ಮೇಲಿನ ನಿಷೇಧ ಎತ್ತಿ ಹಿಡಿದ ಹೈಕೋರ್ಟ್

ಹೊಸದಿಲ್ಲಿ,ಮಾ.16: ವಿವಾದಾತ್ಮಕ ವಾಗ್ಮಿ ಝಾಕಿರ್ ನಾಯ್ಕ್ ಅವರ ಎನ್‌ಜಿಒ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್‌ಎಫ್) ಅನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ತಕ್ಷಣದಿಂದ ನಿಷೇಧಿಸಿ ಕೇಂದ್ರ ಸರಕಾರವು ಕಳೆದ ವರ್ಷ ಕೈಗೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.
ಐಆರ್‌ಎಫ್‌ನ್ನು ತಕ್ಷಣದಿಂದಲೇ ನಿಷೇಧಿಸಲು ಸಾಕಷ್ಟು ಸಾಕ್ಷಾಧಾರಗಳು ಸರಕಾರದ ಬಳಿಯಿವೆ ಎಂದು ಹೇಳಿದ ನ್ಯಾ.ಸಂಜೀವ ಸಚದೇವ ಅವರು, ದೇಶದ ಸಾರ್ವಭೌಮತ್ವ, ಅಖಂಡತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಹಿತಾಸಕ್ತಿಯಿಂದ ತಕ್ಷಣದ ಕ್ರಮವನ್ನು ಕೈಗೊಂಡಿರುವಂತಿದೆ ಎಂದರು.
ಕೇಂದ್ರ ಗೃಹ ಸಚಿವಾಲಯವು 2016,ನ.17ರಂದು ಯುಎಪಿಎ ಅಡಿ ಐಆರ್‌ಎಫ್‌ನ್ನು ತಕ್ಷಣದಿಂದಲೇ ನಿಷೇಧಿಸಿತ್ತು.
ಕೇಂದ್ರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ ಜೈನ್ ಅವರು ಐಆರ್‌ಎಫ್‌ನ್ನು ನಿಷೇಧಿಸಲು ಆಧಾರವಾಗಿದ್ದ ದಾಖಲೆಗಳನ್ನು ನ್ಯಾಯಾಲಯದ ಮುಂದಿರಿಸಿದರು.
ಐಆರ್‌ಎಫ್ ಅಧ್ಯಕ್ಷ ಝಾಕಿರ್ ನಾಯ್ಕ್ ಸೇರಿದಂತೆ ಸಂಸ್ಥೆ ಮತ್ತು ಅದರ ಸದಸ್ಯರ ಹೇಳಿಕೆಗಳು ಮತ್ತು ಭಾಷಣಗಳಿಂದ ಭಾರತೀಯ ಯುವಜನತೆ ಇಸ್ಲಾಮಿಕ್ ಸ್ಟೇಟ್‌ನಂತಹ ಭಯೋತ್ಪಾದಕ ಗುಂಪುಗಳನ್ನು ಸೇರಲು ಪ್ರಚೋದನೆ ಪಡೆಯಬಹುದು ಎಂಬ ಆತಂಕದಿಂದ ಸಂಸ್ಥೆಯನ್ನು ನಿಷೇಧಿಸುವ ತುರ್ತು ಕ್ರಮ ಅಗತ್ಯವಾಗಿತ್ತು ಎಂದು ಜೈನ್ ನ್ಯಾಯಾಲಯಕ್ಕೆ ತಿಳಿಸಿದರು.
ಐಸಿಸ್‌ಗೆ ಸೇರ್ಪಡೆಗೊಂಡಿರುವ ಕೇರಳ ಮೂಲದ ಯುವಕನೋರ್ವನ ತಂದೆಯ ದೂರಿನ ಮೇರೆಗೆ ಮುಂಬೈ ಪೊಲೀಸರು ಈಗಾಗಲೇ ಐಆರ್‌ಎಫ್‌ನ ಇತರ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಬಂಧನಕ್ಕೊಳಗಾಗಿರು ವ ಕೆಲವು ಭಯೋತ್ಪಾದಕರು ಮತ್ತು ಐಸಿಸ್ ಬೆಂಬಲಿಗರು ಐಆರ್‌ಎಫ್‌ನ ಮೂಲಭೂತವಾದಿ ಹೇಳಿಕೆಗಳಿಂದ ತಾವು ಸ್ಫೂರ್ತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಜೈನ್ ಹೇಳಿದರು.







