ಎಪ್ರಿಲ್ 1ರಿಂದ ಅನುಮತಿ ರಹಿತ ಬ್ಯಾನರ್ ತೆರವು: ಮೇಯರ್

ಮಂಗಳೂರು, ಮಾ.16: ರಾಜ್ಯದಲ್ಲಿ ಫ್ಲೆಕ್ಸ್ ನಿಷೇಧಿಸಲಾಗಿದೆ. ಹಾಗಿದ್ದರೂ, ನಗರದಲ್ಲಿ ಈ ನಿಯಮವನ್ನು ಉಲ್ಲಂಸುವ ಘಟನೆ ನಡೆಯುತ್ತಿದೆ. ಎಪ್ರಿಲ್ 1ರಿಂದ ಯಾವುದೇ ರೀತಿಯ ಬ್ಯಾನರ್, ಬಂಟಿಂಗ್ಸ್ ಹಾಕಬೇಕಿದ್ದರೂ ಮನಪಾಕ್ಕೆ ಶುಲ್ಕ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅನುಮತಿ ಪಡೆಯದೆ ಫ್ಲೆಕ್ಸ್ ಹಾಕಿದ್ದಲ್ಲಿ ಅದನ್ನು ತೆರವು ಮಾಡುವುದಲ್ಲದೆ ಸಂಬಂಧಿಸಿದವರ ಮೇಲೆ ದಂಡನಾ ಶುಲ್ಕ ವಿಧಿಸಲಾಗುವುದು. ಈಗಾಗಲೇ ಇರುವ ಎಲ್ಲಾ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಲಾಗುವುದು ಎಂದರು.
ಕಟ್ಟಡ ತ್ಯಾಜ್ಯ ಎಸೆದರೆ ಜೋಕೆ!
ಯಾವುದೇ ರೀತಿಯ ಕಟ್ಟಡ ಒಡೆದ ತ್ಯಾಜ್ಯವನ್ನು ನಗರದೊಳಗೆ, ಹೆದ್ದಾರಿ ಪಕ್ಕದಲ್ಲಿ ಬೇಕಾಬಿಟ್ಟಿ ಸುರಿಯುವುದನ್ನೂ ಮನಪಾ ನಿರ್ಬಂಧಿಸಿರುವುದಾಗಿ ಮೇಯರ್ ಕವಿತಾ ಸನಿಲ್ ಎಚ್ಚರಿಸಿದ್ದಾರೆ.
ಕಟ್ಟಡ ತ್ಯಾಜ್ಯ ಸುರಿಯಲು ಪರ್ಯಾಯವಾಗಿ ಕುಂಜತ್ತಬೈಲ್ ಬಳಿ ಯಾರ್ಡ್ ಗುರುತಿಸಲಾಗಿದೆ, ಎಪ್ರಿಲ್ ತಿಂಗಳಿನಿಂದ ಅಲ್ಲಿಗೆ ಹಾಕುವುದಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.





