ಆರ್.ಕೆ.ನಗರ ಉಪಚುನಾವಣೆಗೆ ದಿನಕರನ್ ಎಐಎಡಿಎಂಕೆ ಅಭ್ಯರ್ಥಿ
ಚೆನ್ನೈ, ಮಾ.16: ಎಐಎಡಿಎಂಕೆಯಲ್ಲಿ ಶಶಿಕಲಾ ಕುಟುಂಬದ ಪಾತ್ರದ ಬಗ್ಗೆ ವಿವಾದಗಳ ಹೊರತಾಗಿಯೂ ಇಲ್ಲಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಅವರ ನಿಕಟ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಪಕ್ಷವು ಆಯ್ಕೆಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು,ದಿನಕರನ್ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ನಿಧನದಿಂದಾಗಿ ತೆರವುಗೊಂಡಿರುವ ಆರ್.ಕೆ.ನಗರ ಕ್ಷೇತ್ರದಲ್ಲಿ ಎನ್ ಮರುಧುಗಣೇಶ ಅವರನ್ನು ತನ್ನ ಅಭ್ಯರ್ಥಿಯಾಗಿ ಡಿಎಂಕೆ ಬುಧವಾರ ಪ್ರಕಟಿಸಿತ್ತು. ಅದು ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಬೆಂಬಲ ಹೊಂದಿದೆ.
ತನ್ನ ನೇತೃತ್ವದ ಎಐಎಡಿಎಂಕೆ ಬಣದೊಂದಿಗೆ ಕೈಜೋಡಿಸುವಂತೆ ದಿನಕರನ್ ಅವರು ಬಿಜೆಪಿ,ಡಿಎಂಡಿಕೆ,ಪಿಡಬ್ಲುಎಫ್ ಮತ್ತು ಎಂಡಿಎಂಕೆಗಳನ್ನು ಕೋರಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಯಾವುದೇ ಉದ್ದೇಶ ತನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.