ಜೆಎನ್‌ಯು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ
ಆತ್ಮಹತ್ಯೆಗೆ ಪ್ರೇರಣೆ: ಎಫ್‌ಐಆರ್ ದಾಖಲು
ಹೊಸದಿಲ್ಲಿ, ಮಾ.16: ಜವಾಹರಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿ, ದಲಿತ ಸಮುದಾಯದ ಮುತ್ತುಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆಯಂತೆ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತವಿದ್ಯಾರ್ಥಿಯ ತಂದೆ ಜೀವನಂದಮ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು , ಪ.ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಗಿದೆ. ಬುಧವಾರ ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಷಯ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಆತ್ಮಹತ್ಯೆ ಪ್ರಕರಣದಲ್ಲಿ ಈ ಮೊದಲು ಎಫ್‌ಐಆರ್ ದಾಖಲಿಸಿಕೊಂಡಿಲ್ಲ ಎಂಬುದನ್ನು ಒಪ್ಪಿಕೊಂಡ ನಿರ್ಮಲಾ ಸೀತಾರಾಮನ್, ಆದರೆ ಸರಕಾರ ದಿಲ್ಲಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ತಿಳಿಸಿದೆ ಎಂದು ಹೇಳಿಕೆ ನೀಡಿದ್ದರು.
ಮೃತವಿದ್ಯಾರ್ಥಿಯ ಕುಟುಂಬವರ್ಗದವರನ್ನು ಭೇಟಿಯಾಗಿದ್ದ ಸಚಿವರು ಎಐಐಎಂಎಸ್‌ನ ಶವಾಗಾರಕ್ಕೆ ಭೇಟಿ ನೀಡಿದ್ದರು. ನೇಣು ಹಾಕಿಕೊಂಡ ಸಂದರ್ಭ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಶವಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.