ಪೆಟ್ರೋಲ್, ಡೀಸೆಲ್ ಸೆಸ್: ಜೇಬಿಗೆ ಕತ್ತರಿ
ಹೊಸದಿಲ್ಲಿ, ಮಾ.16: ಪೆಟ್ರೋಲ್ ಹಾಗೂ ಹೈಸ್ಪೀಡ್ ಡೀಸೆಲ್ ಮೇಲೆ ಅಧಿಕ ಮೊತ್ತದ ಎಕ್ಸೈಸ್ ಸುಂಕವನ್ನು ಕೇಂದ್ರ ಸರಕಾರ ವಿಧಿಸುತ್ತಿದ್ದು, ಇದರಿಂದಾಗಿ ಕೇಂದ್ರದ ಪರೋಕ್ಷ ತೆರಿಗೆ ಆದಾಯದಲ್ಲಿ ಈ ಸೆಸ್ ಪಾಲು 2015-16ರಲ್ಲಿ ಶೇ.34ರಷ್ಟಿದ್ದುದು ಇದೀಗ ಶೇ.40ಕ್ಕೆ ಹೆಚ್ಚಿದೆ.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಈ ಬಗ್ಗೆ ಅಧ್ಯಯನ ನಡೆಸಿದ್ದು, ಕೇಂದ್ರದ ಅಬ್ಕಾರಿ ಸುಂಕ ಶೇ.70ರಷ್ಟು ಹೆಚ್ಚಿದ್ದು, 2013-14ರಲ್ಲಿ 1.69 ಕೋಟಿ ರೂ. ಇದ್ದ ಆದಾಯ 2015-16ರಲ್ಲಿ 2.87 ಕೋಟಿ ರೂ.ಗೆ ಏರಿದೆ. ಈ ಪೈಕಿ ಬಹುತೇಕ ಪಾಲು ಪೆಟ್ರೋಲ್, ಡೀಸೆಲ್, ಸಿಗರೇಟ್ ಹಾಗೂ ಗುಟ್ಕದಿಂದ ಬಂದಿದೆ ಎಂದು ಹೇಳಲಾಗಿದೆ.
2013-14ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ಬಂದ ಸುಂಕ ಒಟ್ಟು ಸಂಗ್ರಹದ ಶೇ.52ರಷ್ಟಿತ್ತು. 2015-16ರಲ್ಲಿ ಈ ಪ್ರಮಾಣವನ್ನು ಸರಕಾರ ಗಣನೀಯವಾಗಿ ಹೆಚ್ಚಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಲೀಟರ್‌ಗೆ ಕ್ರಮವಾಗಿ 1.2 ರೂ. ಹಾಗೂ 1.46 ರೂ. ಇದ್ದುದು ಇದೀಗ ಅನುಕ್ರಮವಾಗಿ 8.95 ರೂ. ಹಾಗೂ 7.96 ರೂ. ಹೆಚ್ಚಿದೆ. ಪೆಟ್ರೋಲಿಯಂ ಉತ್ಪನ್ನಗಳ ಆದಾಯ 2013-14ರಲ್ಲಿ 88 ಸಾವಿರ ಕೋಟಿ ರೂ. ಇತ್ತು. ಮರುವರ್ಷ ಇದು 1.99 ಕೋಟಿ ರೂ.ಗೆ ಹೆಚ್ಚಿದೆ. ತಂಬಾಕು ಉತ್ಪನ್ನಗಳ ಮೇಲೆ ವಿಧಿಸುವ ತೆರಿಗೆಯಿಂದ ಸುಮಾರು 21 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ.
ಉಪಖಂಡದ ಇತರ ದೇಶಗಳಾದ ಪಾಕಿಸ್ತಾನ ಹಾಗೂ ಶ್ರೀಲಂಕಾವನ್ನು ಹೋಲಿಸಿದರೆ, ಈ ಪ್ರಮಾಣ ಪಾಕಿಸ್ತಾನ ಹಾಗೂ ಶ್ರೀಲಂಕಾಗಿಂತ ಅಧಿಕ.