ಬೈರಾಪುರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಕಾಡಾನೆ ಸೆರೆ
ಸ್ಥಳಾಂತರಕ್ಕೆ 5 ಸಾಕು ಆನೆಗಳ ಬಳಕೆ

ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ
ಮೂಡಿಗೆರೆ, ಮಾ.16: ಕಳೆದ ಹಲವು ವರ್ಷಗಳಿಂದ ತಾಲೂಕಿನಾದ್ಯಂತ ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ, ಜನರ ಪ್ರಾಣ ಬಲಿ ತೆಗೆದುಕೊಂಡಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಬೈರಾಪುರ ವ್ಯಾಪ್ತಿಯ ಅರಣ್ಯದಲ್ಲಿ ಕಾಡಾನೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು, ಮೈಸೂರಿನಿಂದ ಭೀಮ, ಅಭಿಮನ್ಯು, ಕೃಷ್ಣ, ವಿಕ್ರಮ್, ಹರ್ಷ ಎಂಬ 5 ಸಾಕು ಆನೆಗಳನ್ನು ಕರೆ ತಂದು ಕಾಡಾನೆ ಸೆರೆಗೆ ಪ್ರಯತ್ನ ನಡೆಸಿದರು.
ಸತತ ಪ್ರಯತ್ನದ ಬಳಿಕ ಕಾಡಂಚಿನಲ್ಲಿರುವ ಮೋಟೇಗೌಡ ಎಂಬವರ ಮನೆ ಸಮೀಪದ ತೋಟದಲ್ಲಿ ಅರವಳಿಕೆ ಮದ್ದು ನೀಡಿ ಪುಂಡ ಆನೆಯನ್ನು ಸೆರೆಹಿಡಿಯಲಾಯಿತು. ನಂತರ ಪ್ರಜ್ಞೆ ಬರುವ ಔಷಧಿ ಕೊಟ್ಟು ಲಾರಿ ಮೂಲಕ ನಾಗರಹೊಳೆ ದುಬಾರೆ ಆನೆ ಬಿಡಾರಕ್ಕೆ ಸಾಗಣೆ ಮಾಡಲಾಯಿತು.
2015ರಲ್ಲಿ ಈ ಕಾಡಾನೆಯು ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು ಬಣಕಲ್ ಹೋಬಳಿಯ ಇಂದಿರಾನಗರದ ಮಂಜಯ್ಯ, ಪಲ್ಗುಣಿ ಗ್ರಾಮದಲ್ಲಿ ನಾಸಿರ್‌ಎಂಬವರನ್ನು ಕೊಂದು ಹಾಕಿತ್ತು. ಅಲ್ಲದೆ, ಅನೇಕ ಜನರನ್ನು ತುಳಿದು ಗಂಭೀರ ಗಾಯಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಬ್ಬೇನಹಳ್ಳಿಯ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ರಸ್ತೆ ತಡೆ ನಡೆಸಿ ಆನೆಯನ್ನು ಹಿಡಿದು ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ಮೂಡಿಗೆರೆ ಆರ್‌ಎಫ್‌ಒ ಪ್ರಹ್ಲಾದ್, ಮೈಸೂರಿನ ಪಶು ವೈದ್ಯರ ತಂಡ, ಹಾಸನ ವಿಭಾಗದ ಅರಣ್ಯ ವೀಕ್ಷಕ ಶಾರ್ಪ್ ಶೂಟರ್ ಹಾಲೂರು ವೆಂಕಟೇಶ್ ಸೇರಿದಂತೆ ಸುಮಾರು 80 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.







