‘ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ 2.97 ಕೋ. ರೂ ಬಿಡುಗಡೆ’
ಮಡಿಕೇರಿ, ಮಾ.16: ಕೊಡಗಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ರಾಜ್ಯ ಸರಕಾರ ರೂ. 2.97 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉದ್ದೇಶದಿಂದ ದೊಡ್ಡ ಮೊತ್ತದ ಅನುದಾನ ಒದಗಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖಾ ಸಚಿವ ತನ್ವೀರ್ ಸೇಠ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಮಂಜೂರು ಮಾಡಿರುವ ಅನುದಾನದಲ್ಲಿ ಪ್ರಮುಖವಾಗಿ ಜಿಲ್ಲಾ ವ್ಯಾಪ್ತಿಯಲ್ಲಿರುವ 39 ಖಬರ್ ಸ್ಥಾನಗಳಿಗೆ ತಡೆಗೋಡೆ ನಿರ್ಮಿಸಿ ರಕ್ಷಣೆೆ ಒದಗಿಸಲು 1.91 ಕೊಟಿ, 22 ಮಸೀದಿಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ 45 ಲಕ್ಷ ರೂ., 14 ದರ್ಗಾಗಳಿಗೆ 28 ಲಕ್ಷ, 17 ಮದ್ರಸಗಳ ಅಭಿವೃದ್ಧಿ ಕಾಮಗಾರಿಗೆ 32.50 ಲಕ್ಷ ರೂ. ಒದಗಿಸಲಾಗಿದೆ. ಅಲ್ಲದೆ, ಹುದಿಕೇರಿ ಮತ್ತು ಶ್ರೀಮಂಗಲದಲ್ಲಿರುವ ಮಸೀದಿಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು 9ಲಕ್ಷ ರೂ. ವೆಚ್ಚದಲ್ಲಿ ವಕ್ಫ್ ಮಂಡಳಿಯಿಂದ ನೇರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ನಗರದ ಗ್ರಾಮಾಂತರ ಠಾಣೆೆಯ ಬಳಿ ನೂತನವಾಗಿ ನಿರ್ಮಾಣವಾಗಿರುವ ವೌಲಾನಾ ಆಝಾದ್ ಭವನದಲ್ಲಿ ವಕ್ಫ್ ಮಂಡಳಿ ಮತ್ತು ಬಿಸಿಎಂ ಇಲಾಖೆ ತನ್ನ ಸ್ವಂತ ಕಚೇರಿ ಹೊಂದಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕ್ಫ್ ಮಂಡಳಿಯ ಉಪಾಧ್ಯಕ್ಷ ಆಲೀರ ಎರ್ಮು, ಜಿಲ್ಲಾ ವಕ್ಫ್ ಅಧಿಕಾರಿ ಸಾದತ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.







