ಗೋವಾ: ಬ್ರಿಟಿಷ್ ಮಹಿಳೆಯ ಹತ್ಯೆಗೆ ಮುನ್ನ ಅತ್ಯಾಚಾರ

ಪಣಜಿ, ಮಾ.17: ದಕ್ಷಿಣ ಗೋವಾ ಬೀಚ್ ಬಳಿ ಮಂಗಳವಾರ 28 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಹತ್ಯೆಗೆ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮಹಿಳೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ಅಂಶ ದೃಢಪಟ್ಟಿದೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಅಟಾಪ್ಸಿ ವರದಿ ವಿವರಿಸಿದೆ. ದೇವಭಾಗ್ ಬೀಚ್ ಬಳಿ ವಿವಸ್ತ್ರವಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು.
ಆಕೆಯ ಗುರುತು ಪತ್ತೆಯಾಗಬಾರದು ಎಂಬ ಕಾರಣಕ್ಕೆ ಆರೋಪಿ ವಿಕಾಸ್ ಭಗತ್, ಆಕೆಯ ಮುಖವನ್ನು ವಿರೂಪಗೊಳಿಸಿದ್ದ. ಆಕೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಬೀರಿನ ಬಾಟಲಿಯಿಂದ ಆಕೆಯ ತಲೆಗೆ ಹೊಡೆಯಲಾಗಿದೆ. ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಅಂಶವನ್ನು ಅಟಾಪ್ಸಿ ವರದಿ ಸ್ಪಷ್ಟಪಡಿಸಿದೆ ಎಂದು ಡಿವೈಎಸ್ಪಿ ಸ್ಯಾಮಿ ಟವರೆಸ್ ಹೇಳಿದ್ದಾರೆ.
ಮೃತ ಮಹಿಳೆಯ ಬಟ್ಟೆಗಳಿದ್ದ ಬ್ಯಾಗ್ ಪತ್ತೆಯಾಗಿದ್ದು, ಹತ್ಯೆ ಬಳಿಕ ಬ್ಯಾಗ್ ಎಸೆಯಲಾಗಿತ್ತು. ಒಡೆದ ಬೀರು ಬಾಟಲಿಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಭಗತ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.