14 ಕೋ.ರೂ. ಪರಿಹಾರಕ್ಕೆ ಸ್ವಯಂ ಆದೇಶ ನೀಡಿದ ನ್ಯಾಯಮೂರ್ತಿ

ಹೊಸದಿಲ್ಲಿ, ಮಾ.17: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿದ್ದಕ್ಕಾಗಿ ಬಂಧನ ವಾರೆಂಟ್ ಎದುರಿಸುತ್ತಿರುವ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ತನಗೆ 14 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬ ಸ್ವಯಂ ಆದೇಶ ಹೊರಡಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.
ಸುಪ್ರೀಂಕೋರ್ಟ್ ಈಗಾಗಲೇ ಕರ್ಣನ್ ಅವರ ಎಲ್ಲ ನ್ಯಾಯಾಧಿಕಾರವನ್ನು ಕಿತ್ತುಕೊಂಡಿದ್ದರೂ, ಸ್ವತಃ ಕರ್ಣನ್ ತಮ್ಮ ಪರ ಆದೇಶ ಹೊರಡಿಸಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್‌ನ ಆರು ಮಂದಿ ಹಿರಿಯ ನ್ಯಾಯಮೂರ್ತಿಗಳು 14 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ 20 ಮಂದಿ ನ್ಯಾಯಮೂರ್ತಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಿ, ಸಂಸತ್ತಿಗೆ ವರದಿ ಸಲ್ಲಿಸಬೇಕು ಎಂದೂ ಅವರು ಆದೇಶಿಸಿದ್ದರು. ಈ ಆರೋಪವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ತನಿಖೆಗೆ ಏಳು ಮಂದಿಯ ನ್ಯಾಯಪೀಠವನ್ನು ರಚಿಸಿದ್ದರು.
ಮಾರ್ಚ್ 10ರಂದು ಕರ್ಣನ್ ವಿರುದ್ಧ ಜಾಮೀನು ಪಡೆಯಬಹುದಾದ ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಸುಪ್ರೀಂಕೋರ್ಟ್ ತನಿಖೆಗೆ ಹಾಜರಾಗುವಂತೆ ಎರಡು ಬಾರಿ ನೀಡಿದ ಸಮನ್ಸ್ ಧಿಕ್ಕರಿಸಿದ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಲಾಗಿತ್ತು.