ಎಂಎಸ್ ಧೋನಿ ಉಳಿದುಕೊಂಡಿದ್ದ ದ್ವಾರಕಾದ ಹೋಟೆಲ್ ನಲ್ಲಿ ಅಗ್ನಿ ದುರಂತ

ಹೊಸದಿಲ್ಲಿ, ಮಾ.17: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಜಾರ್ಖಂಡ್ ತಂಡ ವಾಸ್ತವ್ಯ ಹೂಡಿದ್ದ ದಿಲ್ಲಿಯ ದ್ವಾರಕಾದ ’ವೆಲ್ ಕಮ್’ಹೋಟೆಲ್ ನಲ್ಲಿ ಇಂದು ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದ್ದು, ಧೋನಿ ಸೇರಿದಂತೆ ಜಾರ್ಖಂಡ್ ಆಟಗಾರರು ಆಪಾಯದಿಂದ ಪಾರಾಗಿದ್ದಾರೆ.
ಕ್ರಿಕೆಟಿಗಿರು ವಾಸ್ತವ್ಯ ಹೂಡಿದ್ದ ಹೋಟೆಲ್ ನಲ್ಲಿ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ವಿಜಯ್ ಹಝಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯವನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಲ ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ಇಂದು ಪಾಲಂ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಪಂದ್ಯವನ್ನು ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಾ.19ರಂದು ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮುಂದೂಡಲಾಗಿದ್ದು, ಮಾ.20ರಂದು ನಿಗದಿಯಾಗಿದೆ.
ಸೆಕ್ಟರ್ 10ರಲ್ಲಿರುವ ವೆಲ್ ಕಮ್ ಹೋಟೆಲ್ ನಲ್ಲಿ ಬೆಳಗ್ಗೆ 6:30ಕ್ಕೆ ಅಗ್ನಿ ಕಾಣಿಸಿಕೊಂಡಿತು. ತಕ್ಷಣ 30 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.
ಬೆಂಕಿಯಿಂದಾಗಿ ಆಟಗಾರರ ಕಿಟ್ ಗಳೆಲ್ಲ ಸುಟ್ಟು ಭಸ್ಮವಾಗಿದೆ.
ವೆಲ್ ಕಮ್ ಹೋಟೆಲ್ ನಲ್ಲಿ 540 ಮಂದಿ ಇದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.







