ದೇವ್ಬಂದ್ ಹೆಸರನ್ನು ದೇವವ್ರಂದ ಮಾಡಲು ಹೊರಟ ಹೊಸ ಬಿಜೆಪಿ ಶಾಸಕ !

ಆಗ್ರಾ ಮಾ.17: ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಗೊಂದಲದಲ್ಲಿ ಇನ್ನೂ ಮುಳುಗಿರುವಾಗಲೇ, ಅಲ್ಲಿನ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಥಮ ವಿಧಾನಸಭಾ ಅಧಿವೇಶನದಲ್ಲಿ ಯಾವ್ಯಾವ ಪ್ರಸ್ತಾವಗಳನ್ನು ಮುಂದಿಡಬೇಕೆಂಬ ತಯಾರಿಯಲ್ಲಿ ತೊಡಗಿದ್ದಾರೆ. ಕೆಲವರ ತಯಾರಿ ಈಗಾಗಲೇ ಪೂರ್ತಿಗೊಂಡಿದೆ.
ದೇವ್ಬಂದ್ ಬಿಜೆಪಿ ಶಾಸಕ ಬೃಜೇಶ್ ಸಿಂಗ್ ಅವರಂತೂ ತಮ್ಮ ಕ್ಷೇತ್ರದ ಹೆಸರನ್ನು ‘ದೇವವ್ರಂದ’ ಎಂದು ಬದಲಾಯಿಸಬೇಕೆಂಬ ಬೇಡಿಕೆಯನ್ನು ಮುಂದಿಡಲಿದ್ದಾರೆ. ಈ ಕ್ಷೇತ್ರವು ಮಹಾಭಾರತದೊಂದಿಗಿನ ತನ್ನ ಸಂಬಂಧಕ್ಕೆ ಹೆಚ್ಚು ಖ್ಯಾತವಾಗಿದೆಯೇ ಹೊರತು ದೇವ್ಬಂದಿ ಇಸ್ಲಾಮಿಕ್ ಆಂದೋಲನದ ಬೇರು ಹೊಂದಿರುವ ದಾರುಲ್ ಉಲೂಂ ದೇವ್ಬಂದ್ ಗಲ್ಲವೆಂಬುದು ಈ ಶಾಸಕನ ವಾದವಾಗಿದೆ.
‘‘ಈ ಪಟ್ಟಣ ಯಾವತ್ತೂ ದೇವವ್ರಂದ ಎಂದೇ ಖ್ಯಾತವಾಗಿದೆ. ಮಹಾಭಾರತದ ರಣಖಿಂಡಿ ಇಲ್ಲಿದೆ ಹಾಗೂ ಪಂಚ ಪಾಂಡವರು ಕೂಡ ದೇವವ್ರಂದದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಜರ್ವಾಲ ಎಂಬ ಹೆಸರಿನ ಗ್ರಾಮವು ವಾಸ್ತವವಾಗಿ ಯಕ್ಷವಾಲ ಆಗಿದ್ದು, ಯುಧಿಷ್ಠಿರ ಯಕ್ಷನನ್ನು ಪ್ರಶ್ನಿಸಿದ ಸ್ಥಳವಾಗಿದೆ’’ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದ ಉತ್ತರ ಭಾಗದಲ್ಲಿರುವ ಸಹರಣಪುರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಂದಾಗಿರುವ ದೇವ್ಬಂದ್ ನಲ್ಲಿ ಶೇ.65ರಷ್ಟು ಜನಸಂಖ್ಯೆ ಮುಸ್ಲಿಮರದ್ದಾಗಿದೆ. ಈ ಕ್ಷೇತ್ರದ ಶಾಸಕ ಬೃಜೇಶ್ ಸಿಂಗ್ ಅವರು ಬಿಎಸ್ಪಿಯ ಮಜೀದ್ ಅಲಿಯವರನ್ನು 29,415 ಮತಗಳಿಂದ ಸೋಲಿಸಿದ್ದರು. ಸಿಂಗ್ ಅವರಿಗೆ 1.02 ಲಕ್ಷ ಮತಗಳು ದೊರೆತಿದ್ದವು.







