ಕರ್ಣಿ ಸೇನಾದ ಒಪ್ಪಿಗೆ ಬಳಿಕವೇ ಪದ್ಮಾವತಿ ಚಿತ್ರ ಬಿಡುಗಡೆ : ರಾಜಸ್ಥಾನ ಸಚಿವ

ಜೈಪುರ್,ಮಾ.17 : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಬಹು ನಿರೀಕ್ಷಿತ ಹಾಗೂ ಅಷ್ಟೇ ವಿವಾದಾಸ್ಪದ ಚಿತ್ರ ‘ಪದ್ಮಾವತಿ’ಯ ಸೆಟ್ ಅನ್ನು ದುಷ್ಕರ್ಮಿಗಳು ಇತ್ತೀಚೆಗೆ ಧ್ವಂಸಗೊಳಿಸಿದ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವ ಅರುಣ್ ಚತುರ್ವೇದಿ, ಚಿತ್ರವನ್ನು ಶ್ರೀ ರಾಷ್ಟ್ರೀಯ ಕರ್ಣಿ ಸೇನಾದೆದುರು ಪ್ರದರ್ಶಿಸಿದ ನಂತರವಷ್ಟೇ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಚಿತ್ರಕ್ಕೆ ಇರುವ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡ ನಂತರವಷ್ಟೇ ಅದನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವುದು ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.
ಈ ಹಿಂದೊಮ್ಮೆ ಜನವರಿ 27ರಂದು ಕೂಡ ಜೈಪುರದಲ್ಲಿ ಚಿತ್ರದ ಸೆಟ್ ಮೇಲೆ ದಾಳಿ ನಡೆದಿದ್ದರೆ ಇನ್ನೊಂದು ದುಷ್ಕರ್ಮಿಗಳ ತಂದ ಚಿತ್ತೋರಗಢ ಕೋಟೆಯಲ್ಲಿರುವ ಪದ್ಮಿನಿ ಅರಮನೆಯಲ್ಲಿನ ಕನ್ನಡಿಗಳಿಗೆ ಹಾನಿಗೈದಿತ್ತು.
ನಿರ್ದೇಶಕ ಬನ್ಸಾಲಿ ತಮ್ಮೊಂದಿಗೆ ಸಂಧಾನಕ್ಕೆ ಬಂದಿದ್ದಾರೆಂದು ಕರ್ಣಿ ಸೇನಾ ಜೈಪುರ ದಾಳಿಯ ನಂತರ ಹೇಳಿಕೊಂಡಿತ್ತು.
ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವೆ ಕನಸಿನ ದೃಶ್ಯವೊಂದು ಚಿತ್ರದಲ್ಲಿದೆಯೆಂಬುದೇ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಆದರೆ ಇಂತಹ ಯಾವುದೇ ದೃಶ್ಯ ಚಿತ್ರದಲ್ಲಿಲ್ಲ ಎಂದು ಬನ್ಸಾಲಿ ಮತ್ತವರ ತಂಡ ಈಗಾಗಲೇ ಸ್ಪಷ್ಟಪಡಿಸಿದೆ.