ಜೀವ ವಿಮಾ ಹಣಕ್ಕಾಗಿ ಹಂದಿಗಳನ್ನು ಸುಟ್ಟು, ತನ್ನ ಪುತ್ರಿಯರೆಂದ ವ್ಯಾಪಾರಿ !

ಸೂರತ್, ಮಾ.17 : ಅಸ್ತಿತ್ವದಲ್ಲೇ ಇಲ್ಲದ ನಾಲ್ಕು ಮಂದಿ ಪುತ್ರಿಯರ ಹೆಸರಿನಲ್ಲಿ ವಿಮಾ ಪಾಲಿಸಿಗಳನ್ನು ಪಡೆದಿದ್ದ ಮಹುವ ತೆಹಸಿಲ್ ನ ಮುಲಡ್ ಗ್ರಾಮದ ತರಕಾರಿ ಮಾರಾಟಗಾರನೊಬ್ಬ ತನ್ನ ಪುತ್ರಿಯರು ಮನೆಯಲ್ಲಿ ಬೆಂಕಿ ಅವಘಢವೊಂದರಲ್ಲಿ ಸುಟ್ಟು ಕರಕಲಾಗಿದ್ದಾರೆಂದು ಹೇಳಿ ಬೋಗಸ್ ಮರಣ ಪ್ರಮಾಣಪತ್ರಗಳನ್ನು ಪಡೆದು ವಿಮಾ ಹಣವನ್ನು ಪಡೆಯಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಆರೋಪಿಯನ್ನು ರಮೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಆತ ತನ್ನ ಮನೆಯಲ್ಲಿ ನಾಲ್ಕು ಹಂದಿಗಳನ್ನು ಕೂಡಿ ಹಾಕಿ ಅದು ತನ್ನ ಪುತ್ರಿಯರ ಸುಟ್ಟ ದೇಹವೆಂದು ಇತರರನ್ನು ನಂಬಿಸಲು ಹೊರಟಿದ್ದ.
ಆತ ತನ್ನ ನಾಲ್ಕು ಮಂದಿ ‘ಪುತ್ರಿಯರ’ ಹೆಸರಿನಲ್ಲಿ ತಲಾ ರೂ 5 ಲಕ್ಷದ ವಿಮಾ ಪಾಲಿಸಿಗಳನ್ನು ನಕಲಿ ಫೋಟೋ ಹಾಗೂ ದಾಖಲೆಗಳನ್ನು ಸಲ್ಲಿಸಿ ಪಡೆದಿದ್ದನಲ್ಲದೆ ತನ್ನ ಪುತ್ರಿಯರ ವಯಸ್ಸು 8 ರಿಂದ 12 ಎಂದೂ ಹೇಳಿಕೊಂಡಿದ್ದ.
ಆದರೆ ಮಾರ್ಚ್ 13ರಂದು ಆತ ಸೋರುತ್ತಿರುವ ಅಡುಗೆ ಅನಿಲ ಸಿಲಿಂಡರ್ ಮೂಲಕ ತನ್ನ ಮನೆಗೆ ಬೆಂಕಿ ಹಚ್ಚಿ ವಿಮಾ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿವಾಹಿತನಾಗಿದ್ದರೂ ಆತನಿಗೆ ಮಕ್ಕಳಿಲ್ಲವೆಂದು ಪೊಲೀಸರು ಹೇಳಿದ್ದಾರೆ.







