ಕಡವೆಗೆ ಮಿಡಿದ ಹೃದಯಗಳು !
.jpg)
ಹಾಸನ, ಮಾ.17: ಹಲವು ವರ್ಷಗಳಿಂದ ಸಾಕಿ ಸಲುಹಿದ ಕಡವೆಯನ್ನು ನೋಡಿದ ಕುಟುಂಬದ ಹೃದಯಗಳು ಮಿಡಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ಪರಮೇಶ್ ಮತ್ತು ಕುಸುಮ ದಂಪತಿಗಳು ಕಡವೆಯನ್ನು ನೋಡಿ ಮರುಗಿದವರು.
ಕಳೆದ 7 ವರ್ಷಗಳ ಹಿಂದೆ ಅವರ ಹಸು ಕರು ಹಾಕಿತು. ದುರದೃಷ್ಟವಶ ಕರು ಸಾವನಪ್ಪಿತ್ತು. ಕಾಡಿನಲ್ಲಿ ಕಡವೆ ಮರಿಯ ತಾಯಿ ಬೇಟೆಗಾರನ ಗುರಿಗೆ ಸಿಕ್ಕಿ ಸಾವನಪ್ಪಿದ್ದು, ಒಂದೇ ಮರಿ ಉಳಿದಿತ್ತು. ಪರಮೇಶ್ ಹಸುಗಳು ಆ ಸ್ಥಳಕ್ಕೆ ಅಹಾರಕ್ಕಾಗಿ ಹೋಗಿ ಬರುವಾಗ ಜೊತೆಯಲ್ಲಿ ಕಡವೆ ಮರಿ ಕೂಡ ಸೇರಿಕೊಂಡಿತು. ಕೆಲ ದಿನಗಳಲ್ಲೆ ಕುಟುಂಬದ ಸದಸ್ಯರಾಗಿ ಹೊಂದಿಕೊಂಡಿತು.
ಹಸು ಈ ಮರಿಗೆ ಹಾಲನ್ನು ಕುಡಿಸುತಿತ್ತು. ಮೂರು ವರ್ಷದವರೆಗೂ ಕಡವೆ ಅವರ ಸುಪರ್ದಿಯಲ್ಲಿ ಇತ್ತು. ಕಾಡಿನ ಪ್ರಾಣಿಗಳೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕಡವೆಯನ್ನು ಕೊಂಡೂಯ್ದರು. ಸುರಕ್ಷಿತವಾಗಿ ಕಡವೆಯನ್ನು ನಮಗೆ ಒಪ್ಪಿಸಿದ್ದೀರಿ ಎಂದು ಪ್ರಶಂಸೆಯ ಪತ್ರ ನೀಡಲಾಯಿತು. ಕಡವೆಯನ್ನು ನಗರದ ಗೆಂಡೆಕಟ್ಟೆ ಅರಣ್ಯದಾಮಕ್ಕೆ ತಂದು ಬಿಡಲಾಗಿತ್ತು.
ಕೆಲ ದಿವಸಗಳ ಹಿಂದೆ ಈ ಕಡವೆ ಪ್ರಾಣಿಗಳು ಅಹಾರಕ್ಕಾಗಿ ಪರದಾಡುತ್ತಿರುವ ಬಗ್ಗೆ ಟಿವಿಯಲ್ಲಿ ತೋರಿಸಿದಾಗ ಪರಮೇಶ್ ಕುಟುಂಬದವರಿಗೆ ಕರಳು ಕಿತ್ತು ಬಂದಂತಾಯಿತು. ತಕ್ಷಣ ಕಡವೆ ಬಳಿ ಬಂದೆ ಬಿಟ್ಟರು. ಗೆಂಡೆಕಟ್ಟೆ ಅರಣ್ಯದಾಮದಲ್ಲಿ ಇವರು ಇಟ್ಟ ಹೆಸರು 'ರಾಜು' ಎಂದು ಕೂಗಿದರು. ಕೆಲ ಸಮಯ ಹುಡುಕಾಡಿದರು. ನಂತರ ಮೆಲ್ಲಗೆ ಇವರ ಬಳಿ ಬರುವ ಮೂಲಕ ಸ್ಥಳದಲಿದ್ದವರಿಗೆ ಆಶ್ಚರ್ಯವನ್ನು ಉಂಟು ಮಾಡಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯಲು ನೀರು ಮತ್ತು ಹಸಿರು ಸೊಪ್ಪು ಇಲ್ಲದಿರುವುದರಿಂದ ಕೆಲ ದಿವಸಗಳ ಮಟ್ಟಿಗಾದರೂ ಕಡವೆಯನ್ನು ಸಾಕಲು ನಮಗೆ ಕೊಡುವಂತೆ ಹಾಸನ ಡಿಎಫ್ ಬಳಿ ಕೇಳಿಕೊಂಡರೂ ಯಾವ ಪ್ರಯೋಜನವಾಗಲಿಲ್ಲ. ಕೇಂದ್ರ ವನ್ಯಜೀವಿ ವಿಭಾಗದಿಂದ ಅನುಮತಿ ಪಡೆಯಬೇಕು ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ. ದಂಪತಿಗಳು ನಿರಾಸಯಲ್ಲಿ ವಾಪಸ್ ಮನಗೆ ಹೋಗಬೇಕಾಯಿತು. ಮುಂದೆಯಾದರೂ ಕಡವೆ ಸಾಕಲು ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಡವೆಯನ್ನು ಸಾಕಿ ಸಲಗಿದ ಪರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಹಸುಗಳೊಂದಿಗೆ ಬಾಂದವ್ಯ ಹೊಂದಿದ್ದ ಕಡವೆ ಹಸು ಹಾಲು ಕುಡಿದು ಬೆಳೆದಿದೆ. ದನಗಳ ಜೊತೆ ಇದು ಕೂಡ ಆಹಾರ ಸೇವಿಸಿ ಎಂದಿನಂತೆ ವಾಪಸ್ ಬರುತ್ತಿತ್ತು. ಈ ಸಮಯದಲ್ಲಿ ಅರಣ್ಯ ಅಧಿಕಾರಿಗಳು ಕೂಡ ನಮಗೆ ಯಾರು ತೊಂದರೆ ಮಾಡಲಿಲ್ಲ. ಆದರೆ ಕೆಲವರು ನಮ್ಮ ಮೇಲೆ ದೂರು ನೀಡಿದ ಪರಿಣಾಮ ಅರಣ್ಯಾಧಿಕಾರಿಗಳು ಅದನ್ನು ಇಲ್ಲಿಂದ ಕೊಂಡೂಯ್ದರು. ಈಗ ನಗರದ ಗೆಂಡೆಕಟ್ಟೆ ಅರಣ್ಯದಾಮಕ್ಕೆ ಬಿಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲೆ ಇದ್ದು, ಕಡವೆ ಬಾಡಿ ಹೋಗಿದೆ. ಬರಗಾಲದಿಂದ ಮರ ಗಿಡಗಳೆಲ್ಲಾ ಸುಟ್ಟು ಹೋಗಿದೆ. ಸಮರ್ಪಕವಾಗಿ ಮೇವು ಸಿಗುವವರೆಗೂ ನಮಗೆ ಕಡವೆಯನ್ನು ನೀಡಿ ಅದನ್ನು ಸಾಕಿ ಸಲಗಿ ಮತ್ತೆ ವಾಪಸ್ ನೀಡುತ್ತವೆ ಎಂದು ಮನವಿ ಮಾಡಿದ್ದಾರೆ.
ಗೆಂಡೆಕಟ್ಟೆ ಅರಣ್ಯದಾಮಕ್ಕೆ ಬಂದಾಗ ದಂಪತಿಗಳು ರಾಜು ಎಂದು ಕರೆದ ಕೂಡಲೇ ಅವರ ಬಳಿ ಬಂದಿತ್ತು. ಆಗ ತನ್ನ ಮಕ್ಕಳ ಮುದ್ದು ಮಾಡುವ ರೀತಿ ಇದನ್ನು ಕೂಡ ಮುದ್ದಾಡಿದರು. ಹಣ್ಣು, ಎಲೆ ತಿನ್ನಿಸಲಾಯಿತು. ಈ ವೇಳೆ ಸ್ಥಳದಲ್ಲಿದ್ದ ಪ್ರಾಣಿ ಪ್ರಿಯರಲಿ ಇಂತಹ ಪ್ರೀತಿ ನೋಡಿ ಸಂತಸವಾಯಿತು.







