ಸಿಯರಾ ಲಿಯೋನ್ ಗಣಿಯಲ್ಲಿ 706 ಕ್ಯಾರಟ್ ವಜ್ರ ಪತ್ತೆ
ಈವರೆಗಿನ 10ನೆ ಅತಿ ದೊಡ್ಡ ವಜ್ರ?

ಫ್ರೀಟೌನ್ (ಸಿಯರಾ ಲಿಯೋನ್), ಮಾ. 17: ಪೂರ್ವ ಸಿಯರಾ ಲಿಯೋನ್‌ನ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಪಾಸ್ಟರ್ ಒಬ್ಬರು ಅತ್ಯಂತ ಅಪರುಪದ 706 ಕ್ಯಾರಟ್ ವಜ್ರವೊಂದನ್ನು ಹೊರದೆಗೆದಿದ್ದಾರೆ.
ಇದು ಈವರೆಗೆ ಪತ್ತೆಯಾದ ವಜ್ರಗಳ ಪೈಕಿ 10ನೆ ಅತಿ ದೊಡ್ಡ ವಜ್ರವಾಗಿರುವ ಸಾಧ್ಯತೆಯಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಈ ವಜ್ರವನ್ನು ಹೊರದೆಗೆದಿದ್ದು ಇಮಾನುಯೆಲ್ ಮೊಮೊಹ್. ವಜ್ರ ಸಮೃದ್ಧ ಕೊನೊ ವಲಯದಲ್ಲಿರುವ ಅನೌಪಚಾರಿಕ ಗಣಿ ಕ್ಷೇತ್ರದಲ್ಲಿ ತಮ್ಮ ಅದೃಷ್ಟವನ್ನು ಅರಸುತ್ತಿರುವ ಸಾವಿರಾರು ಮಂದಿಯ ಪೈಕಿ ಇವರೂ ಒಬ್ಬರು.
ಮುಂದಕ್ಕೆ ಈ ವಜ್ರ ಮಾರಾಟಗೊಂಡರೆ, ಅದರಿಂದ ಬಂದ ಹೆಚ್ಚಿನ ಪ್ರಮಾಣದ ಹಣ ಸರಕಾರಿ ಪರವಾನಿಗೆಯೊಂದಿಗೆ ಸ್ವಯಂ ಗಣಿಗಾರಿಕೆ ನಡೆಸುತ್ತಿರುವ ಮೊಮೊಹ್‌ರಿಗೆ ಸಲ್ಲುತ್ತದೆ. ಮಾರಾಟ ಮೊತ್ತದ 4 ಶೇಕಡ ವೌಲ್ಯನಿಗದಿ ಮತ್ತು ರಫ್ತಿಗಾಗಿ ಸರಕಾರಕ್ಕೆ ಹೋಗುತ್ತದೆ. ಜೊತೆಗೆ, ಅನಿರ್ದಿಷ್ಟ ಪ್ರಮಾಣದ ಆದಾಯ ತೆರಿಗೆಯನ್ನೂ ಸರಕಾರಕ್ಕೆ ಪಾವತಿಸಬೇಕಾಗುತ್ತದೆ.
ವಜ್ರವನ್ನು ಅಧ್ಯಕ್ಷ ಅರ್ನೆಸ್ಟ್ ಬೈ ಕೊರೊಮ ಅವರಿಗೆ ಬುಧವಾರ ತೋರಿಸಿ, ಬಳಿಕ ಫ್ರೀಟೌನ್‌ನಲ್ಲಿರುವ ಸೆಂಟ್ರಲ್ ಬ್ಯಾಂಕ್ ತಿಜೋರಿಯಲ್ಲಿ ಇಡಲಾಯಿತು.
ಕಿಂಬರ್ಲೆ ಪ್ರಕ್ರಿಯೆಯ ಬಳಿಕ, ವಜ್ರಕ್ಕೆ ಅಧಿಕೃತ ವೌಲ್ಯ ನಿಗದಿಪಡಿಸಲಾಗುವುದು. ವಜ್ರಗಳು ‘ಸಂಘರ್ಷ ಮುಕ್ತ’ ಎಂಬ ಪ್ರಮಾಣಪತ್ರವನ್ನು ಕಿಂಬರ್ಲೆ ಪ್ರಕ್ರಿಯೆಯು ನೀಡುತ್ತದೆ.







