ಪರಿಷ್ಕೃತ ಮುಸ್ಲಿಮ್ ನಿಷೇಧ ಆದೇಶಕ್ಕೂ ನ್ಯಾಯಾಲಯದಿಂದ ತಡೆ : ನ್ಯಾಯಾಂಗ ಸಮರಕ್ಕೆ ಟ್ರಂಪ್ ಆಡಳಿತ ಸಜ್ಜು

ವಾಶಿಂಗ್ಟನ್, ಮಾ. 17: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಆದೇಶಕ್ಕೂ ಎರಡು ಫೆಡರಲ್ ನ್ಯಾಯಾಧೀಶರು ತಡೆ ವಿಧಿಸಿರುವ ಹಿನ್ನೆಲೆಯಲ್ಲಿ, ಶ್ವೇತಭವನ ಸುದೀರ್ಘ ಕಾನೂನು ಹೋರಾಟವೊಂದಕ್ಕೆ ಸಜ್ಜಾಗಿದೆ.
ಜನವರಿ 27ರಂದು ಹೊರಬಿದ್ದ ಟ್ರಂಪ್‌ರ ಮೊದಲ ಮುಸ್ಲಿಮ್ ನಿಷೇಧ ಆದೇಶ ಅಮೆರಿಕ ಮತ್ತು ಇತರ ದೇಶಗಳ ವಿಮಾನ ನಿಲ್ದಾಣಗಳಲ್ಲಿ ಭಾರೀ ಅವ್ಯವಸ್ಥೆ ಮತ್ತು ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ, ಫೆಡರಲ್ ನ್ಯಾಯಾಲಯಗಳು ಅದಕ್ಕೆ ತಡೆಯಾಜ್ಞೆ ನೀಡಿದವು.
ಇದರಿಂದ ಮುಖಭಂಗಕ್ಕೊಳಗಾದ ಟ್ರಂಪ್ ಆಡಳಿತ ಇತ್ತೀಚೆಗೆ ಪರಿಷ್ಕೃತ ವಲಸೆ ನಿಷೇಧ ಆದೇಶವನ್ನು ಹೊರಡಿಸಿತು. ಈಗ ಇದಕ್ಕೂ ನ್ಯಾಯಾಲಯಗಳು ತಡೆ ವಿಧಿಸಿರುವುದು ಟ್ರಂಪ್‌ಗೆ ಭಾರೀ ಮುಖಭಂಗವಾಗಿದೆ.
ರಿಪಬ್ಲಿಕನ್ ಆಡಳಿತವು ತನ್ನ ಪ್ರಯಾಣ ನಿಷೇಧ ಆದೇಶವನ್ನು ‘ಬಲವಾಗಿ ಸಮರ್ಥಿಸುವುದು’ ಎಂದು ಶ್ವೇತಭವನ ಹೇಳಿದೆ. ಇದಕ್ಕೂ ಮೊದಲು, ಈ ‘ಭಯಾನಕ’ ಆದೇಶದ ವಿರುದ್ಧ ಸಿಡಿಮಿಡಿಗುಟ್ಟಿದ ಟ್ರಂಪ್, ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್‌ನಲ್ಲಾದರೂ ಇದನ್ನು ಪ್ರಶ್ನಿಸಲಾಗುವುದು ಎಂದು ಹೇಳಿದರು.
‘‘ದೋಷಪೂರಿತ ತೀರ್ಪುಗಳನ್ನು ಪ್ರಶ್ನಿಸಲು ನಾವು ಉದ್ದೇಶಿಸಿದ್ದೇವೆ’’ ಎಂದು ಅಧ್ಯಕ್ಷರ ವಕ್ತಾರ ಸಿಯಾನ್ ಸ್ಪೈಸರ್ ನುಡಿದರು.
ಪರಿಷ್ಕೃತ ಆದೇಶವು ಗುರುವಾರ ಮಧ್ಯರಾತ್ರಿ ಜಾರಿಗೆ ಬರಬೇಕಾಗಿತ್ತು. ಆದರೆ, ಇರಾನ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಮತ್ತು ಯಮನ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು 90 ದಿನಗಳ ಕಾಲ ನಿಷೇಧಿಸುವ ಟ್ರಂಪ್ ಆದೇಶವನ್ನು ಹವಾಯಿ ರಾಜ್ಯದ ಫೆಡರಲ್ ನ್ಯಾಯಾಧೀಶರೊಬ್ಬರು ಅಮಾನತಿನಲ್ಲಿಟ್ಟರು.
ನ್ಯಾಯಾಂಗದ ಸೀಮೋಲ್ಲಂಘನ!
ತನ್ನ ಪರಿಷ್ಕೃತ ಮುಸ್ಲಿಮ್ ನಿಷೇಧ ಆದೇಶಕ್ಕೆ ಫೆಡರಲ್ ನ್ಯಾಯಾಲಯಗಳು ತಡೆಯಾಜ್ಞೆ ನೀಡಿರುವುದು ‘ನ್ಯಾಯಾಂಗದ ಅಭೂತಪೂರ್ವ ಸೀಮೋಲ್ಲಂಘನ’ವಾಗಿದೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ತನ್ನ ಅಧ್ಯಕ್ಷೀಯ ಅಭಿಯಾನದ ವೇಳೆ ಆವೇಶಭರಿತ ಮುಸ್ಲಿಮ್ ವಿರೋಧಿ ಮಾತುಗಳನ್ನು ಆಡಿದ್ದ ಟ್ರಂಪ್, ಈಗ ಅವುಗಳಿಗೆ ನ್ಯಾಯಾಲಯಗಳಲ್ಲಿ ವಿವರಣೆಗಳನ್ನು ಕೊಡಬೇಕಾಗಿದೆ.







