2 ಸಾವಿರ ರೂ. ನೋಟು ಹಿಂದೆಗೆತ ಇಲ್ಲ: ಜೇಟ್ಲಿ

ಹೊಸದಿಲ್ಲಿ, ಮಾ.17: ನಗದು ಅಮಾನ್ಯದ ಆನಂತರ ಬಿಡುಗಡೆಗೊಳಿಸಲಾದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲವೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಭಾರತೀಯ ರಿಸರ್ವ್‌ಬ್ಯಾಂಕ್‌ನ ಕರೆನ್ಸಿ ಸಂಗ್ರಹಾಗಾರಕ್ಕೆ 2016ರ ಡಿಸೆಂಬರ್ 10ರ ತನಕ, 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಒಟ್ಟು 12.44 ಕೋಟಿ ರೂ. ವೌಲ್ಯದ ನೋಟುಗಳು ವಾಪಸ್ ಬಂದಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅವುಗಳಲ್ಲಿ ಕೆಲವು ನಕಲಿ ನೋಟುಗಳಾಗಿರುವ ಸಾಧ್ಯತೆಗಳಿವೆ. ಜೊತೆಗೆ ತಪ್ಪು ಎಣಿಕೆ ಹಾಗೂ ಎರಡು ಬಾರಿ ಎಣಿಕೆ ಇತ್ಯಾದಿ ಪ್ರಮಾದಗಳಾಗಿರುವ ಸಾಧ್ಯತೆಯಿರುವುದರಿಂದ ನೋಟುಗಳ ನಿಖರವಾದ ವೌಲ್ಯದ ಕುರಿತ ಅಂತಿಮ ಅಂಕಿಸಂಖ್ಯೆಗಳನ್ನು ಇನ್ನಷ್ಟೇ ಪ್ರಕಟವಾಗಬೇಕಿದೆ ’’ ಎಂದರು.
2017ರ ಮಾರ್ಚ್ 3ರಂದು 12 ಲಕ್ಷ ಕೋಟಿ ರೂ. ವೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಜನವರಿ 27ರಂದು ಚಲಾವಣೆಯಲ್ಲಿದ್ದ ಕರೆನ್ಸಿಯ ವೌಲ್ಯ 9.921 ಲಕ್ಷ ಕೋಟಿ ರೂ. ಆಗಿತ್ತೆಂದು ಜೇಟ್ಲಿ ತಿಳಿಸಿದರು. ನಗದು ಅಮಾನ್ಯತೆಯಿಂದಾಗಿ ದೇಶದ ಒಟ್ಟು ಆಂತರಿಕ ಉತ್ಪನ್ನವು ಬೃಹತ್ ಪ್ರಮಾಣದಲ್ಲಿ ಬೆಳೆಯಲಿದೆಯೆಂದವರು ಪ್ರತಿಪಾದಿಸಿದರು.ಭ್ರಷ್ಟಾಚಾರ, ಕಪ್ಪುಹಣ, ಖೋಟಾನೋಟು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಇತ್ಯಾದಿ ಪಿಡುಗುಗಳನ್ನು ಮೂಲೋತ್ಪಾಟನೆಗೊಳಿಸುವ ಸರಕಾರದ ದೃಢನಿರ್ಧಾರದ ಭಾಗವಾಗಿ, ನೋಟು ನಿಷೇಧ ಅಭಿಯಾನವನ್ನು ನಡೆಸಲಾಗಿದೆಯೆಂದವರು ತಿಳಿಸಿದರು.
ನಗದು ಅಮಾನ್ಯದಿಂದಾಗಿ ಬ್ಯಾಂಕುಗಳಲ್ಲಿ ಠೇವಣಿಯ ಪ್ರಮಾಣ ಹೆಚ್ಚಾಗಿದ್ದು, ಇದರ ಪರಿಣಾಮ ಬಡ್ಡಿದರಗಳಲ್ಲಿ ಕುಸಿತವುಂಟಾಗಿದೆ. ಬ್ಯಾಂಕ್‌ಗಳಿಗೂ ತಮ್ಮ ಸಾಲನೀಡಿಕೆಯ ನೆಲೆಯನ್ನು ವಿಸ್ತರಿಸಲು ಇದರಿಂದ ಸಾಧ್ಯವಾಗಿದೆಯೆಂದು ಜೇಟ್ಲಿ ತಿಳಿಸಿದರು.