ಬಂಟ್ವಾಳ: ಸಂಭ್ರಮದ ತಲಪಾಡಿ ಉತ್ಸವಕ್ಕೆ ತೆರೆ

ಬಂಟ್ವಾಳ, ಮಾ. 17: ಕೋಮು ಸಾಮರಸ್ಯ ಹಾಗೂ ಜನರ ನಡುವೆ ಪ್ರೀತಿ ಸೌಹಾರ್ದ ಇಂದಿನ ಅನಿವಾರ್ಯತೆಯಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡ್ ತಲಪಾಡಿ ಅಲ್‌ರಹ್ಮಾ ಫೌಂಡೇಶನ್ ಇದರ 3ನೆ ವಾರ್ಷಿಕೋತ್ಸವದ ಅಂಗವಾಗಿ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆದ ಸಂಭ್ರಮದ ತಲಪಾಡಿ ಉತ್ಸವ ಮತ್ತು 4 ದಿನಗಳ ಧಾರ್ಮಿಕ ಮತ ಪ್ರಭಾಷಣದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಅವರು, ಎಲ್ಲ ಧರ್ಮಿಯರನ್ನು ಅಹ್ವಾನಿಸಿ ಹಮ್ಮಿಕೊಂಡಿರುವ ಸಂಭ್ರಮದ ತಲಪಾಡಿ ಉತ್ಸವ ಕಾರ್ಯಕ್ರಮ ಕೋಮು ಸಾಮರಸ್ಯಕ್ಕೆ ಮಾರ್ಗದರ್ಶನವಾಗಿದೆ ಎಂದು ಶುಭ ಹಾರೈಸಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಹನೀಫ್ ಖಾನ್ ಕೋಡಾಜೆ ಮಾತನಾಡಿ, ಮಾದಕ ದ್ರವ್ಯಗಳ ವ್ಯಸನವು ಮುಸ್ಲಿಮ್ ಸಮುದಾಯಕ್ಕೆ ಅಂಟಿರುವ ಬಹುದೊಡ್ಡ ಪಿಡುಗಾಗಿದೆ. ಕೆಲವು ಪ್ರಭಾವಿ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮುಸ್ಲಿಮ್ ಸಮುದಾಯದ ಬಡ, ಅಮಾಯಕ ಯುವಕರನ್ನು ಮಾದಕ ವ್ಯಸನದ ಚಟಕ್ಕೆ ತುತ್ತಾಗಿಸುವ ದಂಧೆ ಕರಾವಳಿಯಲ್ಲಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಸಮುದಾಯದೊಳಗೆ ಪರಸ್ಪರ ಹೊಡೆದಾಟ ನಡೆಯುತ್ತಿದೆ. ರಾಜಕೀಯ ಪ್ರಭಾವದಿಂದಾಗಿ ಮಾದಕ ಪದಾರ್ಥ ಪೂರೈಕೆ ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಕೂಡಾ ಅಸಹಾಯಕರಾಗಿದ್ದಾರೆ ಎಂದು ಆರೋಪಿಸಿದ ಅವರು, ಮಾದಕ ವಸ್ತುಗಳ ಪೂರೈಕೆ, ಮಾರಾಟ ಹಾಗೂ ವ್ಯವನಿಗಳ ವಿರುದ್ಧ ಏಕ ರೀತಿಯಲ್ಲಿ ಕಠಿಣ ರೀತಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲಾ ಜಮಾಅತ್‌ಗಳು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ತಲಪಾಡಿ ಜುಮಾ ಮಸೀದಿಯ ಖತೀಬ್ ಕೆ.ಉಸ್ಮಾನ್ ಮದನಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಕೆ.ಶಾಹುಲ್, ಝುಬೈರ್, ಎಸ್.ಮುಹಮ್ಮದ್ ಸಾಗರ್, ಎಆರ್‌ಎಫ್ ಸ್ವಾಗತ ಸಮಿತಿಯ ಅಧ್ಯಕ್ಷ ಮುಸ್ತಾಕ್, ಅಧ್ಯಕ್ಷ ಬಿ.ಸಿ.ಲತೀಫ್, ಬಿ.ಎಂ.ಮುಸ್ತಾಕ್, ಪ್ರಧಾನ ಕಾರ್ಯದರ್ಶಿ ಅನ್ವರ್ ಕೆ.ಎಚ್., ಗಲ್ಫ್ ವಿಂಗ್‌ನ ಟಿ.ಎಂ.ಸಲೀಂ, ಎನ್‌ಡಿಇ ಅಧ್ಯಕ್ಷ ಆರ್.ಕೆ.ಅಶ್ರಫ್, ಕಮರುದ್ದೀನ್, ಶಮೀರ್, ಅಮೀರ್ ಹಂಝ, ಅಶ್ರಫ್, ರಿಯಾರ್ ಝರಾ, ನವಾರ್ ಕೆ.ಎ. ಲತೀಫ್ ಬಿ.ಸಿ. ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಮುಹಮ್ಮದ್ ಹೈದರಾಲಿ, ರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಮುಹಮ್ಮದ್ ಜಸೀಲ್, ಮುನೀರ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ಮಾಡಿದರು. ಬೆಳ್ತಂಗಡಿ ದಾರುಸ್ಸಲಾಮ್ ದವಾಃ ಕಾಲೇಜಿನ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಕೊನೆಯಲ್ಲಿ ದುಆ ಆಶೀರ್ವಚನ ನೀಡಿದರು.







