ಕೆಲಸಕ್ಕೆಂದು ಬಂದಿದ್ದ ಯುವತಿ ಉಳ್ಳಾಲದಲ್ಲಿ ನಾಪತ್ತೆ

ಉಳ್ಳಾಲ, ಮಾ.17: ಉತ್ತರ ಕನ್ನಡದ ರಾಯಪಟ್ಟಣ, ಹಳಿಯಾಳ ಮೂಲದ ಯುವತಿಯೋರ್ವಳನ್ನು ಕಳೆದ 8ತಿಂಗಳ ಹಿಂದೆ ಅದೇ ಊರಿನ ಇನ್ನೋರ್ವ ಯುವತಿಯೋರ್ವಳು ಮಂಗಳೂರಿನ ಉಳ್ಳಾಲದ ಮೀನಿನ ಉತ್ಪನ್ನದ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿಸಿದ್ದು, ಇದೀಗ ಕೆಲಸಕ್ಕೆ ಸೇರಿದ್ದ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೆಲಸಕ್ಕೆ ಸೇರಿಸಿದ್ದ ಯುವತಿಯೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ದೋಂಡಿಬಾಯಿ ಚಿಮನು ಬಾಜಾರಿ(20)ಎಂಬ ಯುವತಿಯೇ ಉಳ್ಳಾಲಕ್ಕೆ ಕೆಲಸಕ್ಕೆಂದು ಬಂದು ನಾಪತ್ತೆಯಾದ ಯುವತಿಯಾಗಿದ್ದಾಳೆ.
ದೋಂಡಿ ಬಾಯಿಯನ್ನು ಮಂಗಳೂರಿನಲ್ಲಿ ಕೆಲಸಕ್ಕಿದ್ದ ಮೂಲತ: ಅಲಕೇರಾ, ಯಲ್ಲಾಪುರದ ಸುನೀತಾ ದುಳು ಬಿಚ್ಚಕಲೆ(24)ಎಂಬವಳು ಕಳೆದ ಎಂಟು ತಿಂಗಳ ಹಿಂದೆ ತಾನು ಮಂಗಳೂರಿನ ಉಳ್ಳಾಲದ ಮೀನು ಉತ್ಪನ್ನ ಫ್ಯಾಕ್ಟರಿಯೊಂದರ ಏಜೆಂಟ್ ಎಂದು ಪರಿಚಯಿಸಿಕೊಂಡು ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿಸಿದ್ದಳು ಎನ್ನಲಾಗಿದೆ.
ಕಳೆದ ಒಂದು ತಿಂಗಳ ಹಿಂದಷ್ಟೇ ದೋಂಡಿಬಾಯಿ ಊರಿಗೆಬಂದು ಹೋಗಿದ್ದು, ಕಳೆದ 8 ದಿನಗಳಿಂದ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಸುನೀತಾಳಲ್ಲಿ ವಿಚಾರಿಸಲು ಹೊರಟಾಗ ಆಕೆಯ ಮೊಬೈಲ್ ಕೂಡಾ ಸಂಪರ್ಕಕೆ ಸಿಗುತ್ತಿಲ್ಲ ಎಂದು ಆರೋಪಿಸಿ ದೋಂಡಿಬಾಯಿ ಸಹೋದರ ಬಾಬು ಚೆಮನು ಬಾಜಾರಿಯವರು ಮಾರ್ಚ್ 15 ರಂದು ಹಳಿಯಾಳ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಉಳ್ಳಾಲದಲ್ಲಿ ಕೆಲಸಕ್ಕಿದ್ದ ದೋಂಡಿ ಬಾಯಿ ಅಲ್ಲಿಂದಲೇ ನಾಪತ್ತೆಯಾಗಿರುವುದರಿಂದ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಹಳಿಯಾಳ ಠಾಣಾ ಪೊಲೀಸರು ನೀಡಿದ ನಿರ್ದೇಶನದನ್ವಯ ಬಾಬು ಬಾಜಾರಿ ತನ್ನ ಗೌಳಿ ಮತ್ತು ಸಿದ್ಧಿ ಜನಾಂಗದವರೊಂದಿಗೆ ಗುರುವಾರ ರಾತ್ರಿಯೇ ಉಳ್ಳಾಲ ಪೊಲೀಸ್ ಠಾಣೆಗೆ ಬಂದಿದ್ದು ಪ್ರಕರಣದ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಉಳ್ಳಾಲದ ಸಂಬಂಧ ಪಟ್ಟ ಫ್ಯಾಕ್ಟರಿಗೆ ಹೋಗಿ ಪರಿಶೀಲನೆ ನಡೆಸಿದ್ದು ಅಲ್ಲಿ ಯುವತಿ ಸಿಕ್ಕಿಲ್ಲ. ಪೊಲೀಸರು ಯುವತಿಯರ ಮೊಬೈಲ್ ಟವರ್ ಲೊಕೇಶನ್ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.







