‘ನೋಟು ರದ್ದತಿ ವಿದ್ಯುತ್ ಯೋಜನೆಗಳಿಗೆ ಅಡ್ಡಿಯಾಗಿಲ್ಲ’

ಹೊಸದಿಲ್ಲಿ, ಮಾ.17: ಅಧಿಕ ಮೌಲ್ಯದ ನೋಟುಗಳ ಅಮಾನ್ಯೀಕರಣವು ವಿದ್ಯುತ್ ಪ್ರಸರಣ ಯೋಜನೆಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ ಮತ್ತು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ(ಸಿಇಎ)ದ ಯೋಜನೆಗಳು ಎಂದಿನಂತೆಯೇ ಸಾಗಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಉಪಕೇಂದ್ರಗಳ ನಿರ್ಮಾಣ ಕಾರ್ಯಕ್ಕೆ ನೋಟುಗಳ ಅಮಾನ್ಯೀಕರಣದಿಂದ ಯಾವುದೇ ತಡೆಯಾಗಿಲ್ಲ ಎಂದು ರಾಜ್ಯಗಳಿಂದ ಸಿಇಎಗೆ ಮಾಹಿತಿ ದೊರೆತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಂತರ್‌ವಲಯ ಮತ್ತು ಅಂತರ್‌ರಾಜ್ಯ ವಿದ್ಯುತ್ ಪ್ರಸರಣ ಯೋಜನೆಯ ತಿಂಗಳಾವಾರು ವರದಿಯಲ್ಲಿ ನೋಟು ಅಮಾನ್ಯೀಕರಣದಿಂದ ಯೋಜನೆಯ ಪ್ರಗತಿಗೆ ಅಡ್ಡಿಯಾಗಿದೆ ಎಂಬುದನ್ನು ಎಲ್ಲಿಯೂ ತಿಳಿಸಲಾಗಿಲ್ಲ. ಯೋಜನೆಯ ಕಾಮಗಾರಿಯಲ್ಲಿ ತೊಡಗಿರುವ ಗುತ್ತಿಗೆದಾರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ನಗದು ರಹಿತ ಮಾಧ್ಯಮದ ಮೂಲಕ ಸಂಬಳ ಪಾವತಿಯಾಗುವ ಕಾರಣ ನೋಟು ಅಮಾನ್ಯೀಕರಣದಿಂದ ಯಾವುದೇ ಸಮಸ್ಯೆಯಾಗಿಲ್ಲ. ಅಲ್ಲದೆ ವಿದ್ಯುತ್ ಪ್ರಸರಣ ಸಂಸ್ಥೆಗಳು ಸ್ವಂತ ಯಂತ್ರೋಪಕರಣ, ಸ್ಥಾವರಗಳನ್ನು ಹೊಂದಿವೆ . ನೋಟು ಅಮಾನ್ಯಗೊಂಡ ದಿನದಿಂದ (2017ರ ನವೆಂಬರ್ 8) ಇಂದಿನವರೆಗೆ ವಿದ್ಯುತ್ ಪ್ರಸರಣ ಕಾರ್ಯಚಟುವಟಿಕೆ ಯಾವುದೇ ವ್ಯತ್ಯಾಸವಿಲ್ಲದೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.





