ಯುವತಿ ಸ್ನಾನ ಮಾಡುತ್ತಿರುವುದು ಇಣುಕಿ ನೋಡುತ್ತಿದ್ದುದನ್ನು ಪ್ರಶ್ನಿಸಿದಕ್ಕೆ ತಲವಾರಿನಿಂದ ಹಲ್ಲೆ ಮಾಡಿದ ಭೂಪ !

ಬಂಟ್ವಾಳ, ಮಾ. 17: ಒಂದೇ ಮನೆಯ ಐದು ಮಂದಿಗೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡು, ಇನ್ನಿಬ್ಬರು ಸಣ್ಣ ಪುಟ್ಟ ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕುದ್ದುಪದವು ಜನತಾ ಕಾಲಾನಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಘಟನೆಯಿಂದ ಕುದ್ದುಪದವು ಜನತಾ ಕಾಲಾನಿ ನಿವಾಸಿಗಳಾದ ಅಮ್ಮುಪೂಜಾರಿ(65), ಲಲಿತಾ(60), ರಮೇಶ್ ಪೂಜಾರಿ(42) ಗಂಭೀರ ಗಾಯಗೊಂಡಿದ್ದಾರೆ. ಅರುಣ(38), ರಾಜೀವಿ (26) ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಈ ಐವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಕ್ಕದ ಮನೆಯ ಪ್ರಕಾಶ್ ಬೆಳ್ಚಾಡ(47) ಎಂಬಾತ ಮಾರಕಾಯುಧದಿಂದ ಹಲ್ಲೆ ನಡೆಸಿದ ಆರೋಪಿ.
ನೆರೆ ಮನೆಯ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವಾಗ ಪ್ರಕಾಶ್ ಬಚ್ಚಲು ಮನೆಯ ಪಕ್ಕದಲ್ಲಿ ನಿಂತು ನೋಡಿದ್ದನ್ನು ಗಮನಿಸಿ ಅಮ್ಮು ಪೂಜಾರಿ ಮನೆಯವರು ಯಾರೆಂದು ನೋಡಲು ಆಗಮಿಸಿದಾಗ ಪ್ರಕಾಶ್ ಒಬ್ಬರ ಮೇಲೆ ಉಗುಳಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಬಳಿಕ ಕೈಯಲ್ಲಿದ್ದ ಕತ್ತಿಯ ಮೂಲಕ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.
ಮನೆಯಲ್ಲಿ ವಿದ್ಯುತ್ ಇರಲಿಲ್ಲ ಎಂದು ತಂತಿ ಸರಿಪಡಿಸಲು ಲೈನ್‌ಮ್ಯಾನ್ ಜೊತೆಗೆ ಹೋಗಿದ್ದಾಗ ಅಮ್ಮುಪೂಜಾರಿ ಮನೆಯವರು ಪ್ರಶ್ನಿಸಿ ಕಲ್ಲು ಬಿಸಾಡಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ ಎಂದು ಕಿವಿಗೆ ಗಾಯವಾಗಿ ವಿಟ್ಲ ಆಸ್ಪತ್ರೆಗೆ ದಾಖಲಾದ ಪ್ರಕಾಶ್ ಹೇಳಿದ್ದಾರೆ.







