ಪ್ರಧಾನಿ ಮೋದಿಯನ್ನು ಹೋಲುವ ಈ ವ್ಯಕ್ತಿ ಆಗಲಿದ್ದಾರೆಯೇ ಉತ್ತರ ಪ್ರದೇಶದ ಹೊಸ ಸಿಎಂ ?

ಹೊಸದಿಲ್ಲಿ, ಮಾ. 17 : ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೆ ದಿನ, ಸಮಯ, ಸ್ಥಳ ಎಲ್ಲವೂ ನಿಗದಿಯಾಗಿದೆ. ಆದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಲಕ್ನೋದ ಸ್ಮೃತಿ ಉಪವನದಲ್ಲಿ ರವಿವಾರ ಸಂಜೆ ಐದು ಗಂಟೆಗೆ ನೂತನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಹಾಗು ಸಚಿವರು ಪ್ರಮಾಣ ವಚನ ಸ್ವೀಕರಿಸಲು ತಯಾರಿ ನಡೆಯುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾತ್ರ ಇನ್ನೂ ಹೊಸ ಮುಖ್ಯಮಂತ್ರಿ ಯಾರು ಎಂಬುದನ್ನೂ ರಹಸ್ಯವಾಗಿಟ್ಟಿದ್ದಾರೆ.
ಈ ನಡುವೆ ಮುಖ್ಯಮಂತ್ರಿಯಾಗಿ ಅಚ್ಚರಿಯ ಅಭ್ಯರ್ಥಿಯನ್ನು ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರು ನೀಡಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. http://postcard.news ಎಂಬ ಬಲಪಂಥೀಯ ನಿಲುವಿನ, ಕಟ್ಟಾ ಬಿಜೆಪಿ ಬೆಂಬಲಿಗ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಕಟ್ಟಾ ಆರೆಸ್ಸೆಸ್ಸಿಗ ಹಾಗು ಪ್ರಸ್ತುತ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಸ್ವತಂತ್ರ ದೇವ್ ಸಿಂಗ್ ಅವರನ್ನು ಮೋದಿ ಹಾಗು ಷಾ ಅವರು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ರಾಜ್ ನಾಥ್ ಸಿಂಗ್, ಮನೋಜ್ ಸಿನ್ಹ , ಕೇಶವ್ ಪ್ರಸಾದ್ ಮೌರ್ಯ , ಯೋಗಿ ಆದಿತ್ಯನಾಥ್ ಮತ್ತಿತರರ ಹೆಸರುಗಳು ಸಿಎಂ ಹುದ್ದೆಗೆ ಕೇಳಿಬಂದಿದ್ದರೂ ಈವರೆಗೆ ಯಾವುದೇ ಮಾಧ್ಯಮಗಳು ಅಥವಾ ರಾಜಕೀಯ ವಿಶ್ಲೇಷಕರು ಸ್ವತಂತ್ರ ದೇವ್ ಸಿಂಗ್ ಅವರ ಹೆಸರನ್ನು ಉಲ್ಲೇಖ ಕೂಡ ಮಾಡಿಲ್ಲ. ಹೆಚ್ಚಿನವರಿಗೆ ಈ ಹೆಸರೇ ಹೊಸತು.
ಆದರೆ postcard.news ಪ್ರಕಾರ ಕಳೆದ ಮೂರು ದಶಕಗಳಿಂದ ಆರೆಸ್ಸೆಸ್, ಎಬಿವಿಪಿ, ಬಿಜೆಪಿ ಯುವಮೋರ್ಚಾಗಳಲ್ಲಿ ಅತ್ಯಂತ ಸಕ್ರಿಯ ಹಾಗು ಮುಂಚೂಣಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸ್ವತಂತ್ರ ದೇವ್ ಮೋದಿ ಹಾಗು ಷಾ ಅವರ ಅತ್ಯಂತ ನಂಬಿಕಸ್ತ ನಾಯಕ. ಹೆಚ್ಚು ಪ್ರಚಾರದಲ್ಲಿಲ್ಲದ ಆದರೆ ಪಕ್ಷ ಹಾಗು ಸಂಘದ ಕೆಲಸಕ್ಕೆ ಸದಾ ಆದ್ಯತೆ ನೀಡುತ್ತಾ ಬಂದಿರುವ ವ್ಯಕ್ತಿ. ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಕೆಲಸ ಮಾಡಿ ಪಳಗಿರುವ , ಪಕ್ಷದ ಸಿದ್ಧಾಂತಗಳಿಗೆ ಬದ್ಧವಾಗಿರುವ ಸ್ವತಂತ್ರ ದೇವ್ ಅವರಿಗೆ ಈ ಬಾರಿ ಮೋದಿ ದೊಡ್ಡ ಬಹುಮಾನ ನೀಡಲಿದ್ದಾರೆ ಎಂದು ಈ ವೆಬ್ ಸೈಟ್ ವರದಿ ಮಾಡಿದೆ.
ಕಳೆದ ಲೋಕಸಭಾ ಚುನಾವಣೆ ಹಾಗು ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗಳಲ್ಲೂ ತೆರೆಮರೆಯಲ್ಲಿ ಅತ್ಯಂತ ನಿರ್ಣಾಯಕ ಕೆಲಸವನ್ನು ಸ್ವತಂತ್ರ ದೇವ್ ಮಾಡಿದ್ದಾರೆ ಎಂದು ವೆಬ್ ಸೈಟ್ ಹೇಳಿದೆ.
ಶನಿವಾರ ಉತ್ತರ ಪ್ರದೇಶದ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಈಗ ಹೆಚ್ಚಿನ ವರದಿಗಳಲ್ಲಿ ಬಂದಿರುವಂತೆ ಮನೋಜ್ ಸಿನ್ಹ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆಯೇ ಅಥವಾ ರಾಜ್ಯಕ್ಕೆ ಮೋದಿ , ಷಾ ಅವರು ಸ್ವತಂತ್ರ ದೇವ್ ರೂಪದಲ್ಲಿ ದೊಡ್ಡ ಅಚ್ಚರಿ ನೀಡುತ್ತಾರೆಯೇ ಎಂದು ನೋಡಬೇಕು.