ನಡೆದುಕೊಂಡು ಹೋಗುತಿದ್ದ ಬಾಲಕಿ ಮೇಲೆ ಯಮನಂತೆ ಎರಗಿದ ಕಾರು
.jpg)
ಉಡುಪಿ, ಮಾ.17: ತನ್ನ ತಂದೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಪುಟ್ಟ ಬಾಲಕಿಯೊಬ್ಬಳಿಗೆ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಆತ್ರಾಡಿ ಗುಂಡಿಬೈಲು ನಿವಾಸಿ ಕೀರ್ತಿಕುಮಾರ ಎಂಬವರ ಮಗಳು ಕ್ಷಮಾ ಎಂದು ಗುರುತಿಸಲಾಗಿದೆ. ಕೀರ್ತಿಕುಮಾರ್ ಅವರು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳಾದ ಕ್ಷಮಾ ಮತ್ತು ಕಿಶನ್ ಜೊತೆ ತನ್ನ ಅಕ್ಕನ ಮಗಳ ಮದುವೆಯನ್ನು ಮಣಿಪಾಲದ ಆರ್‌ಎಸ್‌ಬಿ ಹಾಲ್‌ನಲ್ಲು ಮುಗಿಸಿ, ಕುಕ್ಕಿಕಟ್ಟೆಯಲ್ಲಿರುವ ಅಕ್ಕನ ಮನೆಗೆ ಬರುತ್ತಿರುವಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ.
ಕುಕ್ಕಿಕಟ್ಟೆಯ ಅಕ್ಕನ ಮನೆ ಎದುರು ಕೀರ್ತಿಕುಮಾರ್ ಕಾರನ್ನು ನಿಲ್ಲಿಸಿದ್ದು, ಪತ್ನಿ ಹಾಗೂ ಕಿಶನ್ ಕಾರಿನಿಂದ ಇಳಿದು ಹೋಗಿದ್ದರು. ಬಳಿಕ ಕೀರ್ತಿಕುಮಾರ್ ಅವರು ಮಗಳು ಕ್ಷಮಾರೊಂದಿಗೆ ರಸ್ತೆ ದಾಟಿ ಮಣ್ಣನ ಕಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಕ್ಕಿಕಟ್ಟೆ ಜಂಕ್ಷನ್‌ನಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಚಾಲಕ ಲಕ್ಷ್ಮೀಪ್ರಸಾದ್, ರಸ್ತೆಯ ತೀರಾ ಎಡಕ್ಕೆ ಬಂದು ಕ್ಷಮಾಳಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡ ಕ್ಷಮಾ ಮಣಿಪಾಲ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ಕ್ಷಮಾ ಪರ್ಕಳದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತಿದ್ದಳು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







