ಕಾರವಾರ: ಬಿಎಸ್ಸೆನ್ನೆಲ್ ಕಚೇರಿ ಕೊಠಡಿಗೆ ಬೆಂಕಿ
ಕಾರವಾರ, ಮಾ.17: ಇಲ್ಲಿನ ಕಾಜುಭಾಗದ ಬಿಎಸ್ಸೆನ್ನೆಲ್ ಮಹಾ ಪ್ರಬಂಧಕರ ಕಚೇರಿಯ ಕೊಠಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಳೆಯ ದಾಖಲೆ ಪತ್ರಗಳು ನಾಶ ಗೊಂಡಿದ್ದು, ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಅಗ್ನಿಶಾಮ ಸಿಬ್ಬಂದಿ ಪಾರು ಮಾಡಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಬಿಎಸ್ಸೆನ್ನೆಲ್ ಕಚೇರಿಯ ಮೊದಲ ಮಹಡಿಯಲ್ಲಿ ಹಳೆಯ ದಾಖಲೆಗಳನ್ನು ಸಂಗ್ರಹಿಸಿದ್ದ ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಅನೇಕ ಹಳೆಯ ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಹೊಗೆ ಮೊದಲ ಮಹಡಿಯಿಂದ 2 ಹಾಗೂ 3ನೆ ಮಹಡಿಗೆ ಆವರಿಸಿದೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 15 ಸಿಬ್ಬಂದಿ ಹೊಗೆಯಿಂದಾಗಿ ಹೊರ ಬರಲಾಗದೆ ಕಚೇರಿಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದರು. ಸೂಕ್ತ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಮೇಲಿನ ಮಹಡಿಯಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ಯಶಸ್ವಿಯಾದರು.
ಮೊದಲು ಒಂದು ವಾಹನ ಮಾತ್ರ ಸ್ಥಳಕ್ಕೆ ಆಗಮಿಸಿತ್ತು. ಘಟನೆಯ ಗಂಭೀರತೆ ಅರಿತ ಅಗ್ನಿ ಶಾಮಕ ಸಿಬ್ಬಂದಿ ತಕ್ಷಣಕ್ಕೆ ಮತ್ತೂ ಒಂದು ವಾಹನವನ್ನು ಕರೆಸಿಕೊಂಡು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಬೆಂಕಿಯ ತೀವೃತೆಗೆ ಕೊಠಡಿಯ ಗೋಡೆಯ ಪ್ಲಾಸ್ಟರ್ ಕಿತ್ತು ಬಿದ್ದಿದೆ. ಕೊಠಡಿಯಲ್ಲಿದ್ದ ಹಳೆಯ ದಾಖಲೆಗಳೆಲ್ಲ ಬೆಂಕಿಗೆ ಆಹುತಿಯಾಗಿದ್ದು, ಯಾವುದೇ ಅಗತ್ಯ ದಾಖಲೆಗಳು ನಷ್ಟವಾಗಿಲ್ಲ. ಬಳಕೆಯಲ್ಲಿಲ್ಲದ ಟಿವಿ, ಕಂಪ್ಯೂಟರ್, ಫ್ಯಾನ್ ಮುಂತಾದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಬಿಎಸ್ಸೆನ್ನೆಲ್ ಕಚೇರಿಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.







