‘ನಾರದ’ಕುಟುಕು ಕಾರ್ಯಾಚರಣೆ ತನಿಖೆ ಸಿಬಿಐಗೆ ಹಸ್ತಾಂತರ
ಕೋಲ್ಕತಾ ಹೈಕೋರ್ಟ್ ಆದೇಶ
ಕೋಲ್ಕತಾ,ಮಾ.17: ತೃಣಮೂಲ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಲಂಚವನ್ನು ಸ್ವೀಕರಿಸಿರುವುದನ್ನು ಬಯಲಿಗೆಳೆದಿದೆಯೆನ್ನಲಾದ ‘ನಾರದ’ ಕುಟುಕು ಕಾರ್ಯಾಚರಣೆಯ ಬಗ್ಗೆ ಸಿಬಿಐ ತನಿಖೆಗೆ ಕೋಲ್ಕತಾ ಹೈಕೋರ್ಟ್ ಆದೇಶಿಸಿದೆ. ಮುಂದಿನ 24 ತಾಸುಗಳೊಳಗೆ ಪ್ರಕರಣದ ವಿವರಗಳನ್ನು ಕಲೆಹಾಕುವಂತೆ ನ್ಯಾಯಾಲಯವು ಸಿಬಿಐಗೆ ಆದೇಶಿಸಿದೆ ಹಾಗೂ ಈ ಬಗ್ಗೆ ಪ್ರಾಥಮಿಕ ತನಿಖೆಯನ್ನು ಆರಂಭಿಸುವಂತೆಯೂ ಅದು ಸೂಚಿಸಿದೆ. ವೀಡಿಯೊ ಟೇಪ್‌ಗಳಲ್ಲಿ ಕಾಣಿಸಿಕೊಂಡಿದ್ದರೆನ್ನಲಾದ ಹಿರಿಯ ಪೊಲೀಸ್ ಅಧಿಕಾರಿ ಎಸ್.ಎಂ.ಎಚ್.ಮಿರ್ಝಾ ವಿರುದ್ಧವು ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಿದೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಸುತ್ತಿರುವ ಪ.ಬಂಗಾಳ ಪೊಲೀಸರು ‘ ಸರಕಾರದ ಕೈಗೊಂಬೆಗಳಂತೆ’ ವರ್ತಿಸುತ್ತಿದ್ದಾರೆಂದು ಅದು ಕಿಡಿಕಾರಿದೆ.
ಕಳೆದ ವರ್ಷ ನಡೆದ ಪ.ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಬಹಿರಂಗಗೊಂಡಿದ್ದ ಈ ರಹಸ್ಯ ವೀಡಿಯೊಟೇಪ್‌ಗಳು ತನ್ನ ವಿರುದ್ಧ ನಡೆಸಲಾದ ರಾಜಕೀಯ ಷಡ್ಯಂತ್ರವೆಂದು ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆಪಾದಿಸಿದ್ದರು. ಆದರೆ ಮರಳಿ ಅಧಿಕಾರಕ್ಕೇರಿದ ಬಳಿಕ ಮಮತಾ ಅವರು ಪ್ರಕರಣದ ತನಿಖೆಯನ್ನು ರಾಜ್ಯಪೊಲೀಸರಿಂದ ನಡೆಸಲು ಸಮ್ಮತಿಸಿದ್ದರು. ಆದರೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯನ್ನು ಪ್ರಶ್ನಿಸಿದ್ದರು.
ಕಳೆದ ವರ್ಷ ಪ.ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪತ್ರಕರ್ತ ಮ್ಯಾಥ್ಯೂ ಸ್ಯಾಮುವೆಲ್ಸ್ ನಡೆಸಿದ್ದ ಈ ಕುಟುಕು ಕಾರ್ಯಾಚರಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಹಲವು ನಾಯಕರು ಲಂಚವನ್ನು ಸ್ವೀಕರಿಸುತ್ತಿದ್ದರೆನ್ನಲಾದ ದೃಶ್ಯಗಳು ಕ್ಯಾಮರಾದಲ್ಲಿ ದಾಖಲಾಗಿದ್ದವು.