ಬ್ಯಾಕ್ -ಫ್ಲಿಕ್ ರನೌಟ್ : ಧೋನಿಗೆ ಗೌರವ ನೀಡಿದ ಸರ್ ಜಡೇಜ

ರಾಂಚಿ, ಮಾ.16: ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು ಮುಗಿಸುವಾಗ ಆಲ್‌ರೌಂಡರ್ ರವೀಂದ್ರ ಜಡೇಜ ಬ್ಯಾಕ್ ಫ್ಲಿಕ್ ರನೌಟ್ ಮಾಡುವ ಮೂಲಕ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನಪಿಸಿಕೊಂಡರು.
137.3ನೆ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅವರು ಹೇಝಲ್‌ವುಡ್ ನೆರವಿನಲ್ಲಿ 2 ರನ್ ಕದಿಯಲು ಯತ್ನಿಸಿದರು. ಆದರೆ ಲೋಕೇಶ್ ರಾಹುಲ್ ಚೆಂಡನ್ನು ಹಿಡಿದು ಜಡೇಜ ಅವರತ್ತ ಎಸೆದರು. ಈ ಹಂತದಲ್ಲಿ ಚೆಂಡನ್ನು ಪಡೆದು ಜಡೇಜ ಸ್ಟಂಪ್‌ನತ್ತ ಹಿಂದಿನಿಂದ ಗುರಿ ಇಟ್ಟರು. ಜಡೇಜ ಗುರಿ ತಪ್ಪಲಿಲ್ಲ. ಹೇಝಲ್‌ವುಡ್ ಕ್ರೀಸ್ ತಲುಪುವ ಮೊದಲೇ ಚೆಂಡು ಸ್ಟಂಪ್‌ಗೆ ಬಡಿದಿತ್ತು. ಮಹೇಂದ್ರ ಧೋನಿ ವಿಕೆಟ್ ಕೀಪರ್ ಆಗಿ ಇಂತಹ ಶೈಲಿಯಲ್ಲಿ ರನೌಟ್ ಮಾಡಿ ಗಮನ ಸೆಳೆದಿದ್ದರು. ಧೋನಿ ತಂಡದಲ್ಲಿ ಇಲ್ಲದಿದ್ದರೂ, ಜಡೇಜ ಅವರು ಧೋನಿ ನೆನಪು ಮಾಡಿಕೊಂಡರು. ಜಡೇಜ 124ಕ್ಕೆ 5 ವಿಕೆಟ್ ಪಡೆದಿದ್ದರು. ಇದರ ಜೊತೆಗೆ ಕೊನೆಯಲ್ಲಿ 1 ರನೌಟ್ ಮಾಡಿ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು ಮುಗಿಸಿದರು. ನಾಯಕ ಸ್ಮಿತ್ ಅವರ ದ್ವಿಶತಕದ ಕನಸು ಈಡೇರಲಿಲ್ಲ. ಹೇಝಲ್‌ವುಡ್ ಖಾತೆ ತೆರೆಯುವ ಮೋದಲೇ ಔಟಾದರು.





