ಆಕ್ಷೇಪಕ್ಕೆ ಮಣಿದು ನೇಮೋತ್ಸವ ಹೆಸರಿನಲ್ಲಿ ಬದಲಾವಣೆ
ಮಂಗಳೂರು, ಮಾ.17: ಚಿತ್ರಾಪುರ ಮಹಂಕಾಳಿ ದೈವಸ್ಥಾನದಲ್ಲಿ ಮಾ.18ರಂದು ಕೊರಗ ತನಿಯ ಹಾಗೂ ಏಳು ಕೊರಪೋಲು ಎಂಬ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ ನೇಮೋತ್ಸವಕ್ಕೆ ಕೊರಗ ಸಮುದಾಯದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ದೈವಸ್ಥಾನವು ಕೊರಗ ತನಿಯ ಹಾಗೂ ಏಳು ಸ್ತ್ರೀ ಶಕ್ತಿ ಸ್ವರೂಪಿಣಿ ದೈವಗಳ ಹೆಸರಿನಲ್ಲಿ ನೇಮೋತ್ಸವ ನಡೆಸಲು ನಿರ್ಧರಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೆ.ಕೆ. ಪೇಜಾವರ, ದೈವಸ್ಥಾನದಲ್ಲಿ ಈ ಮೊದಲು ಕೊರಪೋಲುಗಳ ನೇಮೋತ್ಸವ ನಡೆಸುವುದು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ ಕೊರಪೋಲು ಎಂಬ ಪದ ಕೊರಗ ಜನಾಂಗದ ಸ್ತ್ರೀಯರಿಗೆ ಅವಮಾನವಾಗುವುದೆಂದು ಕೊರಗ ಸಮುದಾಯದವರು ತಿಳಿಸಿದ ಹಿನ್ನೆಲೆಯಲ್ಲಿ ಕೊರಪೋಲು ಪದ ಬಳಕೆಗೆ ನಮ್ಮ ಸಮಿತಿಯು ಕ್ಷಮೆಯಾಚಿಸುವ ಜತೆಗೆ ಕೊರಗತನಿಯ ಹಾಗೂ ಏಳು ಸ್ತ್ರೀ ಶಕ್ತಿ ಸ್ವರೂಪಿಣಿ ದೈವಗಳ ನೇಮೋತ್ಸವ ನಡೆಸಲಾಗುವುದು ಎಂದರು.
ಇಂದು ಬೆಳಗ್ಗೆ ಭಂಡಾರ ಏರುವುದು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ, ಸಂಜೆ 7ಕ್ಕೆ ನಾಗರಾಜ್ ಶೇಟ್ ಉಡುಪಿ ಬಳಗದಿಂದ ಭಕ್ತ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಕ್ಕೆ ನೇಮೋತ್ಸವ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಣೇಶ್ ಹೊಸಬೆಟ್ಟು, ಪುರುಷೋತ್ತಮ ಚಿತ್ರಾಪುರ, ರಮೇಶ್ ಅಂಚನ್, ಲೋಕೇಶ್ ಉಪಸ್ಥಿತರಿದ್ದರು.







