ಅಂಡರ್-17 ಫುಟ್ಬಾಲ್ ವಿಶ್ವಕಪ್: ಬ್ರೆಝಿಲ್, ಚಿಲಿ, ಪರಾಗ್ವೆ ಅರ್ಹತೆ

ಹೊಸದಿಲ್ಲಿ, ಮಾ.18: ಭಾರತದಲ್ಲಿ ನಡೆಯಲಿರುವ ಅಂಡರ್-17 ಫಿಫಾ ವಿಶ್ವಕಪ್‌ಗೆ ಬ್ರೆಝಿಲ್, ಚಿಲಿ ಹಾಗೂ ಪರಾಗ್ವೆ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.
ಚಿಲಿಯಲ್ಲಿ ನಡೆಯುತ್ತಿರುವ ದಕ್ಷಿಣ ಅಮೆರಿಕದ ಅಂಡರ್-17 ಚಾಂಪಿಯನ್‌ಶಿಪ್‌ನಲ್ಲಿ ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ವೆನೆಜುವೆಲಾ ತಂಡವನ್ನು 3-1 ರಿಂದ ಮಣಿಸಿದ ಪರಾಗ್ವೆ , ಇಕ್ವೆಡಾರ್ ತಂಡವನ್ನು 1-0 ಅಂತರದಿಂದ ಮಣಿಸಿದ ಆತಿಥೇಯ ಚಿಲಿ ತಂಡ ಹಾಗೂ ಕೊಲಂಬಿಯಾವನ್ನು 3-0 ಅಂತರದಿಂದ ಮಣಿಸಿರುವ ಬ್ರೆಝಿಲ್ ತಂಡ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ.
ಕೊಲಂಬಿಯ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ರವಿವಾರ ನಡೆಯಲಿರುವ ಟೂರ್ನಿಯ ಕೊನೆಯ ದಿನ ಕೊಲಂಬಿಯಾ ಒಂದು ಅಂಕ ಗಳಿಸಿದರೆ ನಾಲ್ಕನೆ ಸ್ಥಾನ ಪಡೆಯಲಿದೆ.
ಬ್ರೆಝಿಲ್(10 ಅಂಕ) ಆರು ತಂಡಗಳಿರುವ ಲೀಗ್ ಹಂತದ ಪಂದ್ಯದಲ್ಲಿ ಅಗ್ರ ಸ್ಥಾನದಲ್ಲಿದೆ. ಚಿಲಿ(9 ಅಂಕ), ಪರಾಗ್ವೆ(8), ಕೊಲಂಬಿಯಾ(4), ಇಕ್ವೆಡಾರ್ (1) ಹಾಗೂ ವೆನೆಜುವೆಲಾ(1) ಆನಂತರದ ಸ್ಥಾನದಲ್ಲಿವೆ. ಈ ಎಲ್ಲ ತಂಡಗಳು ರವಿವಾರ ತಲಾ ಒಂದು ಪಂದ್ಯವನ್ನಾಡಲು ಬಾಕಿಯಿದೆ.





