ಸರ್ಕಾರಿ ಸೇವೆ ಗುಲಾಮಗಿರಿ ಎಂದ ಕಾಶ್ಮೀರಿ ಐಎಎಸ್ ಟಾಪರ್ ಗೆ ಐಪಿಎಸ್ ಅಧಿಕಾರಿಯ ಪ್ರತಿಕ್ರಿಯೆ ಏನು ನೋಡಿ

ಜಮ್ಮು, ಮಾ.18 : ಕಾಶ್ಮೀರದ ಐಎಎಸ್ ಅಧಿಕಾರಿ ಹಾಗೂ 2010ನೆ ಬ್ಯಾಚಿನ ಟಾಪರ್ ಆಗಿದ್ದ ಡಾ.ಶಾಹ್ ಫೈಸಲ್ ಎಂಬವರು ಸಾಮಾಜಿಕ ತಾಣದಲ್ಲಿ ತಮ್ಮ ಪೋಸ್ಟ್ ಒಂದರಲ್ಲಿ ‘ಸರ್ಕಾರಿ ಸೇವೆ ಮನಸ್ಸು, ಕಣ್ಣು, ನಾಲಗೆ, ಕೈ ಕಾಲುಗಳ ಗುಲಾಮಗಿರಿ’’ ಎಂದು ಹೇಳಿರುವುದಕ್ಕೆ ಐಪಿಎಸ್ ಅಧಿಕಾರಿಯೊಬ್ಬರು ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಫೈಸಲ್ ಅವರು ತಮ್ಮ ಪೋಸ್ಟ್ ನಲ್ಲಿ ‘‘ಉದ್ಯಮಶೀಲತೆ, ಸ್ಟಾರ್ಟ್-ಅಪ್ ಮತ್ತು ಸ್ವಉದ್ಯೋಗವನ್ನು ಕೈಗೆತ್ತಿಕೊಳ್ಳುವ ಯುವಜನತೆಯನ್ನು ಬೆಂಬಲಿಸಲು ನನಗೆ ಬಲವಾದ ಕಾರಣಗಳಿವೆ. ಅವುಗಳು ಮನುಷ್ಯನೊಬ್ಬನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತವೆ. ಸರ್ಕಾರಿ ಸೇವೆ ಕೇವಲ ಹೊಟ್ಟೆಯ ಸ್ವಾತಂತ್ರ್ಯ ನೀಡುತ್ತದೆ’’ ಎಂದು ಮಾರ್ಚ್ 14ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಕಾಶ್ಮೀರದಲ್ಲಿ ಯುವಜನರಿಗೆ ಆದರ್ಶಪ್ರಾಯವಾಗಿರುವ ಶಾಹ್ ಫೈಸಲ್ ಅವರಂತಹ ಅಧಿಕಾರಿಯಿಂದ ಇಂತಹ ಹೇಳಿಕೆ ಬಂದಿರುವುದು ಆಶ್ಚರ್ಯವೇ ಸರಿ.
ಅವರಿಗೆ ತಕ್ಕ ಪ್ರತಿಕ್ರಿಯೆ ನೀಡಿದವರು ಯುವ ಐಪಿಎಸ್ ಅಧಿಕಾರಿ ಶೈಲೇಂದ್ರ ಮಿಶ್ರ. ಎಂ.ಬಿ.ಎ. ಪದವೀಧರರಾಗಿರುವ ಮಿಶ್ರಾ ಪ್ರಸಕ್ತ ಉಧಂಪುರದ ಎಸ್‌ಎಸ್ಪಿ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದಬಾಂಗ್ ಮಾದರಿಯ ವಾದಗಳಿಗೆ ಹೆಸರುವಾಸಿಯಾಗಿದ್ದಾರೆ. ‘‘ಯುವಜನರು ತಮ್ಮ ಕನಸುಗಳನ್ನು ಹಿಂಬಾಲಿಸಬೇಕೆಂದು ಹೇಳುವ ಅವರು ಸರಕಾರಿ ಉದ್ಯೋಗಾಂಕ್ಷಿಗಳಿಗೆ ‘ವೆಲ್‌ಕಂ ಆನ್ ಬೋರ್ಡ್ , ಚಿಯರ್ಸ್’’ ಹೇಳುವವರು.
ಫೈಸಲ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಅವರು ಪೋಸ್ಟ್ ಮಾಡಿದ್ದು ಹೀಗೆ. ‘‘ನಾನು ಏಳು ವರ್ಷಗಳಿಗೂ ಹೆಚ್ಚು ಕಾಲ ಸರಕಾರಿ ಸೇವೆಯಲ್ಲಿದ್ದವನು. ಇದಕ್ಕಿಂತ ಮೊದಲು ಉದ್ಯಮಿಯಾಗಿ ಹಾಗೂ ಕಾರ್ಪೊರೇಟ್ ಕಂಪೆನಿಯ ಉದ್ಯೋಗಿಯೂ ಆಗಿ ಸೇವೆ ಸಲ್ಲಿಸಿದ್ದೆ. ಸರಕಾರಿ ಸೇವೆ ನನಗೇನು ಮಾಡಿದೆಯೆಂದರೆ - ಅದು ನನ್ನ ಬುದ್ಧಿಮತ್ತೆಯನ್ನು ಸುಧಾರಿಸಿದೆ. ನನ್ನ ಯೋಚನಾ ಲಹರಿಯನ್ನು ತೀಕ್ಷ್ಣಗೊಳಿಸಿದೆ ಹಾಗೂ ನನಗೆ ಸಾಕಷ್ಟು ಅನುಭವವನ್ನು ನೀಡಿದೆ. ಲಾಭಕ್ಕಿಂತ ಹೆಚ್ಚಾಗಿ ಮನುಕುಲಕ್ಕೆ ಸಲ್ಲಿಸುವ ಹೆಚ್ಚಿನ ಸೇವೆ ನಮ್ಮನು ಉತ್ತಮರನ್ನಾಗಿಸುತ್ತದೆ. ಈ ಸರ್ಕಾರಿ ಸೇವೆ ಕೇವಲ ನೌಕರಿಯಲ್ಲ, ಅದು ಲಕ್ಷಗಟ್ಟಲೆ ಯುವ ಪ್ರತಿಭೆಗಳಿಗೆ ಅವಕಾಶವೊದಗಿಸುವ ವೇದಿಕೆಯಾಗಿದೆ. ಸರ್ಕಾರಿ ಉದ್ಯೋಗಿಯಾಗಿ ‘ನಾವು ಜನರ’ ಸೇವೆ ಸಲ್ಲಿಸಬಹುದು. ಯುವಜನರೇ ಉದ್ಯಮಶೀಲರಾಗಿ. ಸರ್ಕಾರಿ ಉದ್ಯೋಗಗಳಲ್ಲಿ ಆತ್ಮವಿಶ್ವಾಸಭರಿತ ಜನರೂ ಇದ್ದಾರೆ. ನಿಮಗೆ ಸರ್ಕಾರಿ ಸೇವೆ ಸಲ್ಲಿಸಬೇಕೆಂದಿದ್ದರೆ ನೀವು ಯಾವತ್ತೂ ವಿಜಯಿಯಾಗಬಹುದು. ವೆಲ್ ಕಂ ಆನ್ ಬೋರ್ಡ್, ಚಿಯರ್ಸ್’’ ಎಂದು ಪೋಸ್ಟ್ ಮಾಡಿದ್ದಾರೆ.