ನಡಾವಳಿಗಾಗಿ ಧರಣಿ ಕುಳಿತ ಕೊರಗ ಸಮುದಾಯ
ಚಿತ್ರಾಪುರ ಮಹಾಂಕಾಳಿ ದೈವಸ್ಥಾನದ ನೇಮೋತ್ಸವ ವಿವಾದ

ಮಂಗಳೂರು, ಮಾ.18: ಚಿತ್ರಾಪುರ ಮಹಾಂಕಾಳಿ ದೈವಸ್ಥಾನದಲ್ಲಿ ಇಂದು ರಾತ್ರಿ ನಡೆಯಲಿರುವ ವಿವಾದಿತ ನೇಮೋತ್ಸವದ ಕುರಿತಂತೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆದು ಷರತ್ತುಬದ್ಧ ನೇಮೋತ್ಸವಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಆದರೆ ಈ ಕುರಿತು ನಡೆದ ಮಾತುಕತೆಯ ನಡಾವಳಿಯನ್ನು ಅಧಿಕಾರಿಗಳು ಇನ್ನೂ ನೀಡದಿರುವುದನ್ನು ಆಕ್ಷೇಪಿಸಿ ಕೊರಗ ಸಮುದಾಯದ ಸದಸ್ಯರು ಮಿನಿ ವಿಧಾನಸೌಧದೆದುರು ಧರಣಿ ನಡೆಸುತ್ತಿದ್ದಾರೆ.
ದೈವಸ್ಥಾನದಲ್ಲಿ ಕೊರಗ ತನಿಯ ಹಾಗೂ ಏಳು ಕೊರಪೊಲು ಎಂಬ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ ನೇಮೋತ್ಸವಕ್ಕೆ ಕೊರಗ ಸಮುದಾಯ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಪೊಲೀಸ್ ಠಾಣೆ ಸೇರಿದಂತೆ ತಹಶೀಲ್ದಾರರಿಗೆ ದೂರು ನೀಡಿತ್ತು. ಮಾತ್ರವಲ್ಲದೆ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಮಂಗಳವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಅಸಮಾಧಾನವನ್ನೂ ವ್ಯಕ್ತಪಡಿಸಿ, ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸುರತ್ಕಲ್ ಠಾಣೆಯಲ್ಲಿ ಎಸಿಪಿ ಹಾಗೂ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಕೊರಗ ಸಮುದಾಯದ ಮುಖಂಡರು ಹಾಗೂ ದೈವಸ್ಥಾನದ ಮುಖ್ಯಸ್ಥರ ನಡುವೆ ಮಾತುಕತೆ ನಡೆಸಲಾಗಿತ್ತು.
ಮಾತುಕತೆಯ ವೇಳೆ ನೇಮೋತ್ಸದ ಹೆಸರಿನಲ್ಲಿ ಬದಲಾವಣೆ ಮಾಡಿ ಕೊರಗ ತನಿಯ ಹಾಗೂ ಏಳು ಸೀ ಶಕ್ತಿ ಸ್ವರೂಪಿಣಿ ದೈವಗಳ ಹೆಸರಿನಲ್ಲಿ ನೇಮೋತ್ಸವ ನಡೆಸಲು ದೈವಸ್ಥಾನದ ಆಡಳಿತ ಮಂಡಳಿ ಸಮ್ಮತಿ ಸೂಚಿಸಿತ್ತು. ಇದೇ ವೇಳೆ ಕೊರಗ ಸಮುದಾಯದ ಮುಖಂಡರು, ನೇಮೋತ್ಸವದಲ್ಲಿ ಪಾತ್ರಿಯ ಬಣ್ಣಗಾರಿಕೆ, ಕುಣಿತ ಹಾಗೂ ಸಂಭಾಷಣೆಯಲ್ಲಿಯೂ ಕೆಲವೊಂದು ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಮೂಲಕ ಕೊರಗ ಸಮುದಾಯಕ್ಕೆ ಯಾವುದೇ ರೀತಿಯ ಅವಮಾನ ಆಗದ ರೀತಿಯಲ್ಲಿ ನೇಮೋತ್ಸವ ನಡೆಸಬೇಕೆಂದು ಆಗ್ರಹಿಸಿತ್ತು. ಈ ಬಗ್ಗೆ ಸಭೆಯ ನಡಾವಳಿಯನ್ನು ತಮಗೆ ನೀಡುವಂತೆ ಕೋರಿತ್ತು. ಆದರೆ ತಹಶೀಲ್ದಾರರಿಂದ ಸಭೆಯ ಲಿಖಿತ ನಡಾವಳಿಯನ್ನು ತಮಗೆ ಕಳೆದೆರಡು ದಿನಗಳಿಂದ ನೀಡದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್, ಉಪ ತಹಶೀಲ್ದಾರ್‌ರವರಲ್ಲಿ ಕೇಳಿದಾಗ ಇಂದು ನಾಳೆ ಎಂದು ಹೇಳುತ್ತಿದ್ದಾರೆಯೇ ಹೊರತು ನಡಾವಳಿ ನೀಡುತ್ತಿಲ್ಲ. ಇಂದು ನೇಮೋತ್ಸವ ನಡೆಯಲಿದೆ ಎಂದು ಧರಣಿ ಕುಳಿತಿರುವ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸದಸ್ಯ ಅಣ್ಣಿಯವರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು.
ಕೊರಗ ಸಮುದಾಯದ ಸುಮಾರು 50ಕ್ಕೂ ಅಧಿಕ ಸದಸ್ಯರು ಪ್ರಸ್ತುತ ಮಿನಿ ವಿಧಾನಸೌಧದೆದುರು ಧರಣಿನಿರತರಾಗಿದ್ದಾರೆ. ಈ ನಡುವೆ, ಕೊರಗ ಸಮುದಾಯದ ಆಕ್ಷೇಪಕ್ಕೆ ಮಣಿದು ದೈವಸ್ಥಾನ ಆಡಳಿತ ಮಂಡಳಿಯು ನೇಮೋತ್ಸವ ಹೆಸರಿನಲ್ಲಿ ಬದಲಾವಣೆ ಮಾಡಿರುವುದಲ್ಲದೆ, ಕೊರಪಲು ಎಂಬ ಪದ ಕೊರಗ ಜನಾಂಗದ ಸೀಯರಿಗೆ ಅವಮಾನವಾಗುವುದೆಂದು ಕೊರಗ ಸಮುದಾಯದವರು ತಿಳಿಸಿದ ಪರಿಣಾಮ ಕೊರಪಲು ಪದ ಬಳಕೆಗೆ ತಮ್ಮ ಸಮಿತಿ ಕ್ಷಮೆಯಾಚಿಸುವುದಾಗಿಯೂ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿತ್ತು.







