ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟ ಯಾರಿಗೆ?

ಲಕ್ನೊ, ಮಾ.18: ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿಯ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಶನಿವಾರ ಸಂಜೆ ಉತ್ತರ ಸಿಗುವ ಸಾಧ್ಯತೆಯಿದೆ.
ಉತ್ತರಪ್ರದೇಶ ಸಿಎಂ ಹುದ್ದೆಗೆ ಗೋರಖ್‌ಪುರ ಸಂಸದ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ವೌರ್ಯ, ಶಹಜಾನ್‌ಪುರ ಕ್ಷೇತ್ರದಿಂದ 8 ಬಾರಿ ಚುನಾಯಿತರಾಗಿರುವ ಶಾಸಕ ಸುರೇಶ್ ಖನ್ನಾ ಹಾಗೂ ಕೇಂದ್ರ ಸಚಿವ ಮನೋಜ್ ಸಿನ್ವಾ ಮುಖ್ಯ ಸ್ಪರ್ಧಿಗಳಾಗಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಸ್ವತಂತ್ರದೇವ್ ಸಿಂಗ್ ಹೆಸರೂ ಕೇಳಿಬರುತ್ತಿದೆ.
ಸಿಎಂ ಹುದ್ದೆಗೆ ಹಲವು ಆಕಾಂಕ್ಷಿಗಳಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು,‘‘ಮಾಧ್ಯಮಗಳ ವರದಿಗಳಲ್ಲಿ ಬಂದಿರುವ ಹೆಸರುಗಳು ಸಂಪೂರ್ಣ ಊಹಾಪೋಹದಿಂದ ಕೂಡಿದೆ. ಇಂದು ಸಂಜೆ ಶಾಸಕಾಂಗ ಸಭೆ ಕರೆಯಲಾಗಿದ್ದು, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’’ಎಂದು ಹೇಳಿದ್ದಾರೆ.
ಬಿಜೆಪಿಯ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಮುಖ್ಯಸ್ಥ ವೌರ್ಯ ಮುಂದಿನ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವೌರ್ಯ ಮುಖ್ಯಮಂತ್ರಿ ಸ್ಪರ್ಧೆಯಿಂದ ಹೊರ ನಡೆಯುವಂತಾಯಿತು. ಶಾ ಹೇಳಿಕೆಯ ಬಳಿಕ ಅಸ್ವಸ್ಥರಾಗಿರುವ ವೌರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ವಾರಣಾಸಿಯಲ್ಲಿರುವ ದೇವಾಲಯಗಳ ಭೇಟಿಗೂ, ಸಿಎಂ ಹುದ್ದೆಗೇರುವುದಕ್ಕೆ ಯಾವುದೇ ಸಂಬಂಧವಿಲ್ಲ’’ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ.







