ಪಶ್ಚಿಮವಾಹಿನಿಗೆ ಹೆಚ್ಚುವರಿ ಅನುದಾನಕ್ಕೆ ಅಧಿವೇಶನದಲ್ಲಿ ಆಗ್ರಹ: ಐವನ್ ಡಿಸೋಜ

ಮಂಗಳೂರು, ಮಾ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಪಶ್ಚಿಮ ವಾಹಿನಿ ಯೋಜನೆಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 100 ಕೋಟಿ ರೂ.ನ್ನು ಘೋಷಿಸಲಾಗಿದ್ದು, ಹೆಚ್ಚವರಿ ಅನುದಾನಕ್ಕಾಗಿ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಯನ್ನು ಆಗ್ರಹಿಸುವುದಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದ್ದು, ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟವಾದ ವರದಿಯನ್ನು ಇನ್ನೂ ತಯಾರಿಸಲಾಗಿಲ್ಲ ಎಂದರು.
ಪ್ರಸ್ತುತ ಯೋಜನೆ ಪ್ರಸ್ತಾವನೆ ಹಂತದಲ್ಲಿದೆ. ಯೋಜನೆಗೆ ಸುಮಾರು 2,000 ಕೋಟಿ ರೂ. ವೆಚ್ಚವಾಗಲಿದೆ. ಈ ಬಗ್ಗೆ ಐದು ತಿಂಗಳಲ್ಲಿ ಸ್ಪಷ್ಟವಾದ ವರದಿ ಸಿದ್ಧತೆಗೂ ಸಂಬಂಧಪಟ್ಟವರನ್ನು ಒತ್ತಾಯಿಸುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಅಡಿಕೆ ಬೆಳೆಗಾರರ ಮಂಡಳಿ ಸ್ಥಾಪನೆ
ರಾಷ್ಟ್ರದಲ್ಲಿಯೇ ಕರ್ನಾಟಕದಲ್ಲಿ ಅಡಿಕೆ ಬೆಳೆ ಅತ್ಯಧಿಕವಾಗಿದ್ದು, ಅಡಿಕೆ ಬೆಳೆಗಾರರ ಸಂರಕ್ಷಣೆಗಾಗಿ ಅಡಿಕೆ ಬೆಳೆಗಾರರ ಮಂಡಳಿಯ ಅಗತ್ಯವಿದೆ. ಬೆಳೆಗಾರರ ಬೆಳೆಗೆ ಮಾರುಕಟ್ಟೆ ಒದಗಿಸುವ ಜತೆಗೆ ಉಪ ಉತ್ಪನ್ನಗಳ ತಯಾರಿಗೂ ಪೂರಕವಾಗುವಂತೆ ಮಂಡಳಿ ರಚನೆಯಾಗಬೇಕಿದೆ ಎಂದು ಅವರು ಹೇಳಿದರು. ಈಗಾಗಲೇ ಸಾರಾಯಿ ಮಾರಾಟ ನಿಷೇಧಗೊಂಡಿರುವ ಹಿನ್ನೆಲೆಯಲ್ಲಿ ಬೀದಿಗೆ ಬಿದ್ದಿರುವ ಕರಾವಳಿ ಭಾಗದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಸ್ವ ಉದ್ಯೋಗಕ್ಕೆ ಆರ್ಥಿಕ ನೆರವು ಕಲ್ಪಿಸುವ ನಿಟ್ಟಿನಲ್ಲಿಯೂ ತಾವು ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಐವನ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮುಖಂಡರಾದ ನಾಗೇಂದ್ರ ಕುಮಾರ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.







