ತೆಲಂಗಾಣ:ಆರ್‌ಟಿಐ ಅರ್ಜಿ ಸಲ್ಲಿಸಿದ್ದಕ್ಕಾಗಿ ಯುವಕನಿಗೆ ದಂಡ,ಕುಟುಂಬಕ್ಕೆ ಬಹಿಷ್ಕಾರ!
.jpeg)
ಹೈದರಾಬಾದ್,ಮಾ.18: ತನ್ನ ಗ್ರಾಮದಲ್ಲಿ ಅಳವಡಿಸಲಾಗಿರುವ ವಿದ್ಯುತ್ ಪರಿವರ್ತಕಗಳಲ್ಲಿ ಶಂಕಿತ ಅವ್ಯವಹಾರಗಳನ್ನು ಬಯಲಿಗೆಳೆಯಲು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಯುವಕನೋರ್ವನಿಗೆ 60,000 ರೂ.ದಂಡ ವಿಧಿಸಿ,ಆತನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ಜಿ.ಜಿ.ನಡಿಕುಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಉಸ್ತುವಾರಿ ಹೊಂದಿರುವ ಗ್ರಾಮಾಭಿವೃದ್ಧಿ ಸಮಿತಿಯು ಶೇಂದಿ ಮೂರ್ತೆದಾರ ಬಿ.ರಾಜು ಗೌಡ್ (31) ಮತ್ತು ಅವರ ಕುಟುಂಬವನ್ನು ಬಹಿಷ್ಕರಿಸಿ ಆದೇಶ ಹೊರಡಿಸಿದೆ.
ಗೌಡ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಲೂ ಗ್ರಾಮಸ್ಥರು ನಿರಾಕರಿಸುತ್ತಿದ್ದಾರೆ. ಅವರೊಂದಿಗೆ ಮಾತನಾಡುವವರಿಗೆ 30,000 ರೂ.ದಂಡ ವಿಧಿಸುವುದಾಗಿ ಸಮಿತಿಯು ಎಚ್ಚರಿಕೆ ನೀಡಿದೆ.
ನಮ್ಮ ಮನೆಗೆ ನೀರು,ಹಾಲು ಪೂರೈಕೆಯಾಗುತ್ತಿಲ್ಲ. ನಮ್ಮಿಂದ ಶೇಂದಿಯನ್ನು ಯಾರೂ ಖರೀದಿಸುತ್ತಿಲ್ಲ. ಯಾವುದೇ ಅಂಗಡಿಯಲ್ಲಿಯೂ ನಮಗೆ ಸಾಮಾನು, ತರಕಾರಿ ಮಾರುತ್ತಿಲ್ಲ ಎಂದು ಗೌಡ ಸುದ್ದಿಗಾರರಿಗೆ ತಿಳಿಸಿದರು. ಸದ್ಯ ಅವರು ನೆರೆಯ ಗಡಪಲ್ಲಿ ಗ್ರಾಮದಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ನೆರೆಯ ಗ್ರಾಮದ ಇಬ್ಬರು ಸ್ನೇಹಿತರು ಹೊರತುಪಡಿಸಿದರೆ ನಮ್ಮ ಕಷ್ಟ ಕೇಳುವವರೇ ಇಲ್ಲ. ನಾವು ಕಳೆದ 50 ವರ್ಷಗಳಿಂದಲೂ ಇಲ್ಲಿ ವಾಸವಾಗಿದ್ದು, ಇದೀಗ ನಮ್ಮನ್ನು ಗ್ರಾಮದಿಂದಲೇ ಹೊರದಬ್ಬಲು ಸಮಿತಿಯು ಹುನ್ನಾರ ನಡೆಸುತ್ತಿದೆ ಎಂದು ಗೌಡ್ ಆರೋಪಿಸಿದರು.
ಕಳೆದ ವರ್ಷ ಗೌಡ್ ಅವರ ಆಕಳೊಂದು ಗ್ರಾಮದಲ್ಲಿ ಸ್ಥಾಪಿತ ವಿದ್ಯುತ್ ಪರಿವರ್ತಕ ಗಳಿಂದ ವಿದ್ಯುದಾಘಾತಕ್ಕೀಡಾಗಿ ಸಾವನ್ನಪ್ಪಿತ್ತು. ದೋಷಪೂರಿತ ಪರಿವರ್ತಕಗಳನ್ನು ಪೂರೈಸಲಾಗಿದೆ ಎಂದು ಶಂಕಿಸಿದ್ದ ಅವರು ಮೇ 2016ರಲ್ಲಿ ಈ ಬಗ್ಗೆ ಮಾಹಿತಿಗಳನ್ನು ಕೋರಿ ಸ್ಥಳೀಯ ವಿದ್ಯುತ್ ಇಲಾಖೆಗೆ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಪರಿವರ್ತಕಗಳ ಖರೀದಿಗೆ ಅನುಸರಿಸಲಾಗಿದ್ದ ವಿಧಿವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಅವರು ಬಯಸಿದ್ದರು.
ಇದು ಗೊತ್ತಾದಾಗ ಗ್ರಾಮಾಭಿವೃದ್ಧಿ ಸಮಿತಿಯು ಗೌಡ್ ವಿರುದ್ಧ ಏಕಪಕ್ಷೀಯ ಕ್ರಮವನ್ನು ಕೈಗೊಂಡಿತ್ತು. ಅವರು ಸಲ್ಲಿಸಿರುವ ಅರ್ಜಿಯಿಂದಾಗಿ ಗ್ರಾಮಕ್ಕೆ ವಿದ್ಯುತ್ ಪರಿರ್ತಕಗಳ ಪೂರೈಕೆ ಸ್ಥಗಿತಗೊಳ್ಳಲಿದೆ ಎಂಬ ನೆಪವೊಡ್ಡಿ 60,000 ರೂ.ದಂಡ ವಸೂಲು ಮಾಡಿತ್ತು. ಬಹಳಷ್ಟು ವಾದವಿವಾದಗಳ ಬಳಿಕ ಮುಂದಿನ ಆರು ತಿಂಗಳ ಕಾಲ ವಿದ್ಯುತ್ ಇಲಾಖೆಯಿಂದ ಯಾವುದೇ ತೊಂದರೆ ಎದುರಾಗದಿದ್ದರೆ ದಂಡದ ಹಣವನ್ನು ಮರಳಿಸುವುದಾಗಿ ಸಮಿತಿಯು ಒಪ್ಪಿಕೊಂಡಿತ್ತು.
ಗೌಡ್‌ಗೆ ಬೇರೆ ಆಯ್ಕೆಯೇ ಇರಲಿಲ್ಲ. ಹೀಗಾಗಿ ಹೆಂಡತಿಯ ಚಿನ್ನಾಭರಣಗಳನ್ನು ಅಡವಿರಿಸಿ ದಂಡವನ್ನು ಕಟ್ಟಿದ್ದರು. ಸಮಿತಿ ಸದಸ್ಯರ ಬೆದರಿಕೆಯಿಂದಾಗಿ ತಾನು ಸಲ್ಲಿಸಿದ್ದ ಆರ್‌ಟಿಐ ಅರ್ಜಿಯ ಬಗ್ಗೆ ವಿಚಾರಿಸುವ ಗೋಜಿಗೂ ಅವರು ಹೋಗಿರಲಿಲ್ಲ.
ಈ ವರ್ಷದ ಮಾ.13ರವರೆಗೂ ಕಾದಿದ್ದ ಗೌಡ್ ಕಳೆದ ಆರು ತಿಂಗಳಲ್ಲಿ ವಿದ್ಯುತ್ ಇಲಾಖೆಯಿಂದ ಯಾವುದೇ ತೊಂದರೆಯಾಗದ್ದರಿಂದ ತಾನು ಕಟ್ಟಿದ 60,000 ರೂ.ಗಳನ್ನು ವಾಪಸ್ ಮಾಡುವಂತೆ ಸಮಿತಿಯನ್ನು ಕೋರಿದ್ದರು. ಆದರೆ ಸಮಿತಿಯು ಹಣವನ್ನು ವಾಪಸ್ ಮಾಡಲು ನಿರಾಕರಿಸಿದೆಯಲ್ಲದೆ,ಕುಟುಂಬಕ್ಕೆ ಬಹಿಷ್ಕಾರವನ್ನು ವಿಧಿಸಿದೆ.
ಇದೀಗ ಗೌಡ್ ತನಗಾಗಿರುವ ಅನ್ಯಾಯದ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.