ದ.ಕ ಜಿಲ್ಲೆಯಲ್ಲೂ ತಾಲೂಕು ರಚನೆ ವಿವಾದ: ನೆಲ್ಯಾಡಿ ಗ್ರಾಮಸ್ಥರ ವಿರೋಧ; ನೆಲ್ಯಾಡಿ ತಾಲೂಕು ರಚನೆಗೆ ಸಿ.ಎಂಗೆ ಆಗ್ರಹ
ಮಂಗಳೂರು,ಮಾ.18:ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ನೆಲ್ಯಾಡಿ ತಾಲೂಕು ರಚನೆಯ ಬದಲು ಕಡಬ ತಾಲೂಕು ರಚನೆ ಮಾಡಿರುವುದು ನೆಲ್ಯಾಡಿ ಪ್ರದೇಶದ ಜನರಿಗೆ ನಿರಾಸೆಯನ್ನುಂಟು ಮಾಡಿದೆ ಮತ್ತು ನೆಲ್ಯಾಡಿ ಪ್ರದೇಶದ ಜನರ ತಾಲೂಕು ಬೇಡಿಕೆಯನ್ನು ಪರಿಗಣಿಸದೆ ಜನರಿಗೆ ಅನ್ಯಾಯವಾಗಿದೆ.ಈ ಬಗ್ಗೆ ಮುಖ್ಯ ಮಂತ್ರಿ ತಕ್ಷಣ ಗಮನಹರಿಸಬೇಕು ಎಂದು ನೆಲ್ಯಾಡಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಮುಹಮ್ಮದ್ ಪುತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 20 ವರುಷಗಳಿಂದ ಪುತ್ತೂರು ತಾಲೂಕಿನಿಂದ ಪ್ರತ್ಯೇಕವಾಗಿ ನೆಲ್ಯಾಡಿ ತಾಲೂಕು ರಚಿಸಬೇಕು ಎನ್ನುವ ಬೇಡಿಕೆಯನ್ನು 2017-18ರ ಬಜೆಟ್‌ನಲ್ಲಿ ಪರಿಗಣಿಸಲಾಗಿಲ್ಲ.ಈ ಹಿಂದೆ ತಾಲೂಕು ರಚನೆ ಸಂಬಂಧಿಸಿದಂತೆ ಎಂ.ಬಿ.ಪ್ರಕಾಶ್ ನೇತೃತ್ವದಲ್ಲಿ ರಚಿಸಿದ ಸಮಿತಿ ನೆಲ್ಯಾಡಿ ತಾಲೂಕು ರಚನೆಗೆ ಒತ್ತು ನೀಡಿತ್ತು ಆದರೆ ಈ ಬಾರಿ ಬಜೆಟ್ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎನ್ನುವುದು ನಮಗೆ ಬೇಸರವನ್ನುಂಟು ಮಾಡಿದೆ.ರಾಜಕೀಯ ನಾಯಕರು ನಮ್ಮನ್ನು ಕೇವಲ ಮತ ಬ್ಯಾಂಕ್‌ಗಾಗಿ ಪರಿಗಣಿಸುತ್ತಿರುವುದು ಬೇಸರವನ್ನುಂಟು ಮಾಡಿದೆ ಎಂದು ಮುಹಮ್ಮದ್ ಪುತ್ತು ತಿಳಿಸಿದ್ದಾರೆ.
ಕಡಬ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದ ಬೆಳ್ತಂಗಡಿ ಗ್ರಾಮದ ಅರಸಿನಮಕ್ಕಿ,ಶಿಬಾಜೆ,ಕೊಕ್ಕಡ ಮೊದಲಾದ 5 ಗ್ರಾಮಗಳನ್ನು ಕಡಬಕ್ಕೆ ಸೇರಿಸಿರುವುದ ನೆಲ್ಯಾಡಿಯಿಂದ ಕಡಬಕ್ಕೆ ಸೂಕ್ತ ಸಂಚಾರದ ವ್ಯವಸ್ಥೆ ಇಲ್ಲದೆ ಇರುವ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಿ ನೆಲ್ಯಾಡಿಯ ಜನರಿಗೆ ನಿರಾಸೆಯನ್ನುಂಟು ಮಾಡಲಾಗಿದೆ .ಭೌಗೋಳಿಕವಾಗಿಯೂ ಸೂಕ್ತವಲ್ಲದ ತಾಲೂಕು ಕೇಂದ್ರವನ್ನು ನೆಲ್ಯಾಡಿಯ ಬದಲು ಕಡಬಕ್ಕೆ ಸೇರಿಸಿರುವುದು ಸರಿಯಾದ ಕ್ರಮವಲ್ಲ.ಇದು ನೆಲ್ಯಾಡಿ,ಬಜತ್ತೂರು,ಸೇರಿದಂತೆ ಆಸುಪಾಸಿನ ಜನರಲ್ಲಿ ಬೇಸರವನ್ನುಂಟು ಮಾಡಿದೆ.ಈ ಸಮಸ್ಯೆಯನ್ನು ಬಗೆಹರಿಸಲು ನೆಲ್ಯಾಡಿ ತಾಲೂಕು ಘೋಷಣೆಯ ಬಗ್ಗೆ ತಕ್ಷಣ ಕ್ರಮ ಕೈ ಗೊಳ್ಳಬೇಕು ಎಂದು ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಮುಹಮ್ಮದ್ ಆಗ್ರಹಿಸಿದ್ದಾರೆ.







