ಅಂಧರಿಗಾಗಿ ಕನ್ನಡಕ - ಅರುಣಾಚಲ ವಿದ್ಯಾರ್ಥಿಯಿಂದ ನೂತನ ಆವಿಷ್ಕಾರ

ಗುವಹಾಟಿ,ಮಾ.18: ಅರುಣಾಚಲ ಪ್ರದೇಶದ 11ನೇ ತರಗತಿ ವಿದ್ಯಾರ್ಥಿ ಅನಂಗ್ ತಡರ್ ಅಭಿವೃದ್ಧಿಪಡಿಸಿದ ವಿನೂತನ ತಂತ್ರಜ್ಞಾನದ ಸಾಧನವೊಂದನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಿದರೆ ಅದು ಅಂಧರಿಗೆ ಸುಲಭವಾಗಿ ಅತ್ತಿತ್ತ ಹೋಗಲು ವರದಾನವಾಗಲಿದೆ.
ಇಖೋ ಲೊಕೇಶನ್ ಆಧರಿತ ಈ ತಂತ್ರಜ್ಞಾನವು ಅತ್ಯುತ್ತಮ ಆವಿಷ್ಕಾರವೆಂದು ಗುವಹಾಟಿಯಲ್ಲಿ ಇತ್ತೀಚೆಗೆ ಅಂತ್ಯಗೊಂಡ ಪ್ರಾದೇಶಿಕ ವಿಜ್ಞಾನ ಮೇಳದಲ್ಲಿ ಗುರುತಿಸಲ್ಪಟ್ಟಿತು.
ಗಾಗಲ್ ಫಾರ್ ಬ್ಲೈಂಡ್ ಎಂದು ಕರೆಯಲ್ಪಡುವ ಈ ಕನ್ನಡಕಗಳು ಕಾರುಗಳಲ್ಲಿ ಉಪಯೋಗಿಸಲ್ಪಡುವ ಪಾರ್ಕಿಂಗ್ ಸೆನ್ಸರ್ ಗಳಂತೆಯೇ ಕಾರ್ಯನಿರ್ವಹಿಸುವವು. ಅದನ್ನು ಧರಿಸಿವರಿಗೆ ಕೋಲಿನ ಸಹಾಯವಿಲ್ಲದೆಯೇ ಹತ್ತಿರದಲ್ಲಿರುವ ವಸ್ತುಗಳ ಬಗ್ಗೆ ಅದು ಎಚ್ಚರಿಸುವುದು.
ರೋಬಾಟುಗಳು ಮತ್ತಿತರ ಇಲೆಕ್ಟ್ರಾನಿಕ್ ಉತ್ಪನ್ನಗಳೆಂದರೆ ಪಂಚಪ್ರಾಣವಾಗಿರುವ ಅನಂಗ್ ತಾನು ಕೆಲ ವರ್ಷಗಳ ಹಿಂದೆ ಅಂಧ ಬಾಲಕಿ ಪಡುತ್ತಿರುವ ಕಷ್ಟವನ್ನು ನೋಡಿ ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಅನಂಗ್ ನ ಈ ಸಾಧನೆಯಿಂದ ಸಂತುಷ್ಟಗೊಂಡಿರುವ ಯುನಿಸೆಫ್ ಆತನಿಗೆ ಇಂತಹ ಹಲವು ಪ್ರೊಟೊಟೈಪುಗಳನ್ನು ವಿನ್ಯಾಸಗೊಳಿಸಲು ಹೇಳಿದೆ. ಅನಂಗ್ ಆರಂಭದಲ್ಲಿ ವಿನ್ಯಾಸಗೊಳಿಸಿದ ಸಾಧನ ಸ್ವಲ್ಪ ಭಾರವಾಗಿರುವುದರಿಂದ ಅಂಧರಿಗೆ ಉಪಯೋಗಿಸಲು ಸುಲಭವಾಗುವಂತಹ ಹಗುರವಾದ ಕನ್ನಡಕಗಳನ್ನು ಅಭಿವೃದ್ಧಿ ಪಡಿಸಲು ಆತನಿಗೆ ಹೇಳಲಾಗಿದೆ.

ಈ ತಿಂಗಳು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಕೂಡ ಅನಂಗ್ ಭಾಗವಹಿಸಿದ್ದ. ಆತನಿಗೆ ಅಗತ್ಯವಾದ ಎಲ್ಲಾ ಆರ್ಥಿಕ ಸಹಾಯ ನೀಡುವುದಾಗಿ ಅರುಣಾಚಲ ಪ್ರದೇಶ ಸರಕಾರ ಆಶ್ವಾಸನೆ ನೀಡಿದೆ.







