ಅಧಿಕಾರದ ಕೂಸು ಹುಟ್ಟುವ ಮೊದಲೇ ಗುಜರಾತ್ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿಯ ಕುಲಾವಿಗಾಗಿ ಜಿದ್ದಾಜಿದ್ದಿ

ಅಹ್ಮದಾಬಾದ್,ಮಾ.18: ಗುಜರಾತ್ ವಿಧಾನಸಭಾ ಚುನಾವಣೆ ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿದೆ. ಇನ್ನೂ ಸಾಕಷ್ಟು ಕಾಲಾವಕಾಶವಿದ್ದರೂ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿ ನಾಮಕರಣಗೊಳ್ಳಲು ಈಗಲೇ ತೀವ್ರ ಲಾಬಿ ಆರಂಭ ಗೊಂಡಿದೆ.
ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಕಾಂಗ್ರೆಸ್ ಸುಳಿವು ನೀಡಿದಾಗಿನಿಂದ ಸಾಮಾಜಿಕ ಮಾಧ್ಯಮಗಳ ಪ್ರಚಾರ ಅಭಿಯಾನಗಳಲ್ಲಿ ವಿವಿಧ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದು ಈಗ ಗುಜರಾತ್ ಕಾಂಗ್ರೆಸ್‌ನಲ್ಲಿ ದಿನನಿತ್ಯದ ವ್ಯವಹಾರವಾಗಿದೆ. ಪ್ರತಿಪಕ್ಷ ನಾಯಕ ಶಂಕರಸಿಂಹ ವೇಲಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭರತಸಿಂಹ ಸೋಳಂಕಿ ಅವರು ಈ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.
ಪಕ್ಷದ ರಾಷ್ಟ್ರೀಯ ವಕ್ತಾರ ಶಕ್ತಿಸಿಂಹ ಗೋಹಿಲ್, ಮಾಜಿ ಪಿಸಿಸಿ ಅಧ್ಯಕ್ಷರಾದ ಅರ್ಜುನ ಮೊಧ್ವಾಡಿಯಾ ಮತ್ತು ಸಿದ್ಧಾರ್ಥ ಪಟೇಲ್ ಅವರು ಇತರ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಬಿಜೆಪಿಯನ್ನು ಪರಾಭವಗೊಳಿಸುವ ಉತ್ತಮ ಅವಕಾಶವಿದೆ ಎಂದು ಪಕ್ಷದಲ್ಲಿನ ಹಲವರು ಭಾವಿಸಿದ್ದಾರೆ.
ಗುಜರಾತ್ ಆಡಳಿತದಲ್ಲಿ ಮೋದಿಯವರ ಅನುಪಸ್ಥಿತಿ, ಪಟೇಲ್ ಮೀಸಲಾತಿ ಚಳುವಳಿ, ದಲಿತ ಅಶಾಂತಿ, ಆಡಳಿತ ವಿರೋಧಿ ಅಲೆ ಮತ್ತು ರಾಜ್ಯ ಬಿಜೆಪಿಯಲ್ಲಿ ವಿಶ್ವಾಸಾರ್ಹ ನಾಯಕನ ಕೊರತೆ ಇವೆಲ್ಲ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲಿವೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಬಿಜೆಪಿ 1998ರಿಂದಲೂ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ.
ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿ ಪ್ರಬಲ ನಾಯಕನೋರ್ವನನ್ನು ಬಿಂಬಿಸುವು ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೇಲುಗೈ ದೊರೆಯಲಿದೆ ಎಂದು ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೇಲಾ ಅವರ ಉಮೇದುವಾರಿಕೆಗೆ ಒತ್ತು ನೀಡಲು ಅವರ ಬೆಂಬಲಿಗರು ‘‘ಮುಖ್ಯಮಂತ್ರಿಯಾಗಿ ವೇಲಾ ’’ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ವೇಲಾ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಗಿರುವ ಏಕೈಕ ಆಯ್ಕೆಯಾಗಿದ್ದಾರೆ ಎಂದು ಫೇಸಬುಕ್ ಪುಟದಲ್ಲಿ ಬಣ್ಣಿಸಲಾಗಿದೆ.
ಅತ್ತ ಸೋಳಂಕಿಯವರ ಬೆಂಬಲಿಗರೂ ತಮ್ಮ ನಾಯಕನನ್ನು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯೆಂದು ಬಲವಾಗಿ ಬಿಂಬಿಸುತ್ತಿದ್ದಾರೆ. ಅವರನ್ನು ಬೆಂಬಲಿಸಿ ಹಲವೆಡೆಗಳಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ಇತರ ರಾಜ್ಯ ನಾಯಕರ ಬೆಂಬಲವನ್ನು ಗಳಿಸಲು ಉಭಯ ಗುಂಪುಗಳೂ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಲ್ಲದೇ ಈ ಇಬ್ಬರೂ ನಾಯಕರು ಆಗಾಗ್ಗೆ ದಿಲ್ಲಿಗೆ ಭೇಟಿ ನೀಡುವುದು ಈ ದಿನಗಳಲ್ಲಿ ಮಾಮೂಲಾಗಿಬಿಟ್ಟಿದೆ. ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್‌ರನ್ನು ಭೇಟಿಯಾಗಲು ವೇಲಾ ದಿಲ್ಲಿಗೆ ಹಾರಿದ್ದರು. ಗುಜರಾತ್‌ನವರಾಗಿರುವ ಪಟೇಲ್ ರಾಜ್ಯ ಕಾಂಗ್ರೆಸ್ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರ ಹೊಂದಿದ್ದಾರೆ.