ಪಕ್ಕಲಡ್ಕ ಸ್ನೇಹ ಸರ್ವಿಸ್ ಯೂನಿಟ್‌ಗೆ ಚಾಲನೆ
.gif)
ಮಂಗಳೂರು, ಮಾ.17: ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಸೇವಾ ಮನೋಭಾವವನ್ನು ಮೂಡಿಸಿ ಸಮಾಜಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ನಗರದ ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ‘ಸ್ನೇಹಾ ಸರ್ವಿಸ್ ಯೂನಿಟ್’ಗೆ ಶನಿವಾರ ಚಾಲನೆ ನೀಡಲಾಯಿತು.
ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಿ, ಕಾರ್ಕ್ರಮವನ್ನು ಉದ್ಘಾಟಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸಿ.ಎಚ್.ಅಬ್ದುಸ್ಸಲಾಂ ಮಾತನಾಡಿ, ಸಮಾಜ ಸೇವೆಯು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸೇವೆ ಮಾಡಲು ಶ್ರಮಿಸಬೇಕು ಎಂದರು.
ಶಾಲಾ ಸಂಚಾಲಕ ಯೂಸುಫ್ ಪಕ್ಕಲಡ್ಕ ಸೇವಾ ಪೆಟ್ಟಿಗೆಗೆ ಮೊದಲ ದೇಣಿಗೆ ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಅಧ್ಯಾಪಕಿ ರೈಹಾನ ಸ್ನೇಹಾ ಸರ್ವಿಸ್ ಯೂನಿಟ್ ಕಾರ್ಯ ಚಟುವಟಿಕೆಯ ರೂಪುರೇಷೆಯ ಬಗ್ಗೆ ವಿವರಿಸಿದರು. ಮುಖ್ಯೋಪಾಧ್ಯಾಯಿನಿ ನಾಗರತ್ನಾ, ಸಂಘದ ಸಂಚಾಲಕರಾದ ಅಶೀರುದ್ದೀನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಲ್‌ಶಿಫಾ ಮತ್ತು ತಝ್ಕಿಯ ಕಿರಾಅತ್ ಪಠಿಸಿದರು. ಅಧ್ಯಾಪಕಿ ನುಶ್ರತ್ ಕುರೇಶ್ ಕಾರ್ಯಕ್ರಮ ನಿರೂಪಿಸಿದರು.





