ಮಂಗಳೂರಿನಲ್ಲೂ ಶೀಘ್ರವೇ ನಮ್ಮ ಕ್ಯಾಂಟೀನ್..!

ಮಂಗಳೂರು, ಮಾ.18: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ನಮ್ಮ ಕ್ಯಾಂಟೀನ್ ಘೋಷಣೆಯಾಗಿದೆ. ಈ ಯೋಜನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೂ ವಿಸ್ತರಿಸಲು ಮುಖ್ಯಮಂತ್ರಿಯ ಗಮನಕ್ಕೆ ಅಧಿವೇಶನದಲ್ಲಿ ತರುವುದಾಗಿ ಐವನ್ ಡಿಸೋಜಾ ಹೇಳಿದರು.
ಈ ಯೋಜನೆ ಕುರಿತಂತೆ ರಾಜ್ಯದ ಇಬ್ಬರು ಶಾಸಕರ ಜತೆ ತಾನೇ ಖುದ್ದು ತಮಿಳುನಾಡಿಗೆ ತೆರಳಿ ಅಲ್ಲಿನ ಕ್ಯಾಂಟೀನ್ ವ್ಯವಸ್ಥೆಯನ್ನು ಪರಿಶೀಲಿಸಿ ಬಂದಿದ್ದೇನೆ. ಅತ್ಯುತ್ತಮ ವ್ಯವಸ್ಥೆಯಾಗಿದ್ದು, ಇದು ನಗರದ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಫಲಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡುವ ಯೋಜನೆಯಾಗಿದೆ. ಮಂಗಳೂರಿನಲ್ಲಿಯೂ ಇದನ್ನು ಇಲ್ಲಿ ಶಾಲೆಗಳಿಗೆ ಅಕ್ಷರ ದಾಸೋಹವನ್ನು ಪೂರೈಸುತ್ತಿರುವ ಸೇವಾ ಸಂಸ್ಥೆಗಳ ಮೂಲಕ ನಡೆಸಬಹುದಾಗಿದೆ ಎಂದು ಅವರು ಹೇಳಿದರು.
ಪ್ರತ್ಯೇಕ ಎನ್‌ಆರ್‌ಐ ನಿಗಮ ಸ್ಥಾಪನೆಗೆ ಒತ್ತಾಯ:
ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯಲ್ಲಿ ಕಾರ್ಯಕ್ರಮ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಇದಕ್ಕೆ ಪೂರಕವಾಗಿ ಎನ್‌ಆರ್‌ಐ ನಿಗಮ ಸ್ಥಾಪನೆಗೆ ತಾನು ಅಧಿವೇಶನದಲ್ಲಿ ಆಗ್ರಹಿಸುವುದಾಗಿ ಐವನ್ ಡಿಸೋಜಾ ಹೇಳಿದರು.





