ಅಡುಗೆ ಅನಿಲ ದರ ಏರಿಕೆಗೆ ಜಿಲ್ಲಾ ಕಾಂಗ್ರೆಸ್ ಖಂಡನೆ

ಮಂಗಳೂರು, ಮಾ.18: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲಗಳ ಬೆಲೆ ಇಳಿಕೆಯಾದರೂ ಕೂಡ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ 320 ರೂ.ವಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ 780 ರೂ.ಗೆ ಏರಿಕೆ ಮಾಡಲಾಗಿದೆ. ಇದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯ ಪೊಳ್ಳು ಭರವಸೆ ಮತ್ತು ಭಾಷಣಕ್ಕೆ ಮರುಳಾಗಿ ಜನತೆ ಅವರನ್ನು ಆರಿಸಿದೆ. ಆದರೆ ಈಗ ವಾಸ್ತವ ಏನು ಎಂಬುದು ಜನರಿಗೆ ಅರ್ಥವಾಗಿದೆ. ಮುಂದಿನ ಚುನಾವಣೆಗಳಲ್ಲಿ ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಡವರ ಉದ್ಧಾರ ಮಾಡುತ್ತೇವೆ ಎಂದು ಹೇಳುವ ಮೋದಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಇಳಿಕೆ ಮಾಡಲು ಸಾಧ್ಯವಾಗಿಲ್ಲ. ಪೊಳ್ಳು ಭರವಸೆ ನೀಡುವ ಮೂಲಕ ಅಧಿಕಾರಕ್ಕೇರಿದ ಮೋದಿ ಬಳಗಕ್ಕೆ ಮುಂದಿನ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನರು ಉತ್ತರಿಸಲಿದ್ದಾರೆ ಎಂದ ಇಬ್ರಾಹೀಂ ಕೋಡಿಜಾಲ್, ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದರು.
ಇತ್ತೀಚೆಗೆ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರಪಯೋಗ ಮಾಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಹಣ ಮತ್ತು ತೋಳ್ಬಲ ಬಳಸಿ ಅಧಿಕಾರಕ್ಕೆ ಬಂದಿದೆ. ಉತ್ತರ ಪ್ರದೇಶದಲ್ಲಿ ಜಾತಿವಾದಿಗಳ ಮತ ಒಂದೆಡೆಯಾದರೆ, ಜಾತ್ಯತೀತ ಮತಗಳು ಮೂರು ಕಡೆ ವಿಭಜನೆಯಾಗಿರುವುದರಿಂದ ಬಿಜೆಪಿ ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ ಶೇ. 39ರಷ್ಟು ಮಾತ್ರ ಮತ ಪಡೆದಿದೆ ಎಂದು ಇಬ್ರಾಹೀಂ ಕೋಡಿಜಾಲ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ನಿಯೋಗವೊಂದು ತೆರಳಿ ಜಿಲ್ಲೆಯ ಅಗತ್ಯತೆಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಕುಡಿಯುವ ನೀರಿನ ಸಮಸ್ಯೆಗಾಗಿ ಪಶ್ಚಿಮವಾಹಿನಿ ಯೋಜನೆಗೆ 100 ಕೋಟಿ ರೂ., ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 50 ಕೋಟಿ ರೂ., ವೆನ್‌ಲಾಕ್ ಆಸ್ಪತ್ರೆಯ ಅಭಿವೃದ್ಧಿಗೆ 10 ಕೋಟಿ ರೂ. ಸಹಿತ ಅನೇಕ ಜನ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಕಾಯ್ದಿರಿಸಿದ್ದಾರೆ ಎಂದು ಇಬ್ರಾಹೀಂ ಕೋಡಿಜಾಲ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆ ಕುರಿತು ಪ್ರಸ್ತಾಪಿಸಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ವಾಜಪೇಯಿ, ಮುರಳಿ ಮನೋಹರ ಜೋಷಿ ಮುಂತಾದವರು ಈಗ ಎಲ್ಲಿದ್ದಾರೆ? 70 ವರ್ಷ ಮೀರಿದ ನಾಯಕರನ್ನು ಬಿಜೆಪಿ ಬದಿಗೆ ಸರಿಸಿದೆ. ಹೀಗಿರುವಾಗ ಕಾಂಗ್ರೆಸ್‌ನಲ್ಲಿ ಎಲ್ಲ ಸ್ಥಾನಮಾನ ಪಡೆದ 84ರ ಹರೆಯದ ಕೃಷ್ಣ ಬಿಜೆಪಿ ಸೇರುವ ಮುನ್ನ ಯೋಚಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್ ಕಾಪಿಕಾಡ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್. ಖಾದರ್, ಕಾರ್ಪೊರೇಟರ್‌ಗಳಾದ ಕವಿತಾ ವಾಸು, ರತಿಕಲಾ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ನಝೀರ್ ಬಜಾಲ್, ಹರ್ಷರಾಜ್ ಮುದ್ಯ, ಸಂತೋಷ್‌ಕುಮಾರ್ ಶೆಟ್ಟಿ ಅಸೈಗೋಳಿ ಉಪಸ್ಥಿತರಿದ್ದರು.







