ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ಯೋಜನೆಯ ವಿರುದ್ದ ಗ್ರಾಮಮಟ್ಟದಲ್ಲಿ ಹೋರಾಟ ಸಮಿತಿ ರಚನೆಗೆ ನಿರ್ಧಾರ

ಸುಬ್ರಹ್ಮಣ್ಯ,ಮಾ. 18: ರೈತ ವರ್ಗಕ್ಕೆ ಮಾರಕವಾಗಿರುವ ಡಾ. ಕಸ್ತೂರಿ ರಂಗನ್ ಯೋಜನೆಯ ವಿರುದ್ದ ಸಂಘಟಿತ ಹೋರಾಟಕ್ಕೆ ಶನಿವಾರ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ತಾಲೂಕಿನ 17 ಭಾದಿತ ಗ್ರಾಮಗಳ ಪ್ರಮುಖರ ಸಭೆಯಲ್ಲಿ ನಿರ್ಧಾರಿಸಲಾಯಿತು. ಹೋರಾಟ ತೀವ್ರಗೊಳಿಸುವ ಸಲುವಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಹೋರಾಟ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರ್ ಮಾತನಾಡಿ, ಕೇಂದ್ರ ಸರಕಾರ ಹೊರಡಿಸಿರುವ ಕರಡು ಮಸೂದೆ ಅಂತಿಮ ಹಂತದ್ದು. ಈಗ ಎಚ್ಚೆತುತಿಕೊಳ್ಳದಿದ್ದರೆ ಮುಂದೆ ಕೈಚೆಲ್ಲಿ ಕುಳಿತುಕೊಳ್ಳಬೇಕಾದೀತು ಎಂದು ಹೇಳಿ ಸಭೆಯ ಅಭಿಪ್ರಾಯ ಕೇಳಿದರು.
ಮಾಜಿ ಜಿ.ಪಂ ಸದಸ್ಯ ಭರತ್ ಮುಂಡೋಡಿ ಮಾತನಾಡಿ, ತಾಲೂಕಿನ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರ ಸಮಸ್ಯೆ ಕುರಿತು ಧ್ವನಿಯೆತ್ತಬೇಕಾಗಿದ್ದ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಜನಪ್ರತಿನಿಧಿಗಳಿಗೆ ಜನರ ಬದ್ಧತೆ ಇಲ್ಲ. ಜನ ಸಾಮಾನ್ಯರು ಕೂಡ ಯೋಜನೆಯ ಗಂಭೀರತೆ ಅರಿಯದಿರುವುದು ದುರಾದೃಷ್ಟಕರ ಎಂದು ಆತಂಕ ವ್ಯಕ್ತಪಡಿಸಿದರು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಮುಖಂಡ ದಾಮೋದರ ಗುಂಡ್ಯ ಮಾತನಾಡಿ, ಯಾವುದೇ ಚರ್ಚೆ ಇಲ್ಲದೆ ಯೋಜನೆ ಸ್ಥಗಿತಗೊಳಿಸಬೇಕು. ಸರಕಾರ ಬದಲಾದರೂ ನೀತಿಗಳು ಬದಲಾಗಿಲ್ಲ. ಶಾಂತಿಯುತ ಹೋರಾಟದಿಂದ ಬುದ್ಧಿ ಕಲಿಯದ ಯೋಜನೆಯ ವಿರುದ್ದ ಕ್ರಾಂತಿಕಾರ ಹೋರಾಟ ಅನಿವಾರ್ಯ ಎಂದರು.
ಸಭೆಯಲ್ಲಿದ್ದ ಪ್ರಮುಖರು ಹೋರಾಟ ತೀವ್ರಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮಮಟ್ಟದಲ್ಲಿ ಯೋಜನೆಯ ಗಂಭೀರತೆಯ ಕುರಿತು ಅರಿವು ಮೂಡಿಸಿ ಗ್ರಾಮ ಮಟ್ಟದಲ್ಲಿ ಹೋರಾಟ ಸಮಿತಿ ರಚಿಸಿ ಹೋರಾಟ ತೀವ್ರಗೊಳಿಸುವುದು, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಮಾ. 21ರಂದು ಹಮ್ಮಿಕೊಳ್ಳುವ ಹೋರಾಟದಲ್ಲಿ ಪಾಲ್ಗೊಂಡು ಮುಂದಿನ ದಿನಗಳಲ್ಲಿ ಒಟ್ಟಾಗಿ ಯೋಜನೆಯ ವಿರುದ್ಧ ತೀವ್ರಗತಿಯಲ್ಲಿ ಚಳುವಳಿ ನಡೆಸುವುದು ಎಂದು ಸಭೆ ನಿರ್ಧರಿಸಿತು.
ಸಭೆಯಲ್ಲಿ ಮಲೆನಾಡು ಜಂಟಿ ಕ್ರೀಯಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಪ್ರಮುಖರಾದ ಪಿ.ಸಿ.ಜಯರಾಮ್, ಸುಬ್ರಹ್ಮಣ್ಯ ಕುಳ, ಜೀವನ್ ನಾರ್ಕೊಡು, ಬಿ.ಸಿ. ವಸಂತ, ಬಾಲಸುಬ್ರಹ್ಮಣ್ಯ ಭಟ್, ವೈ.ಪಿ. ಪ್ರಕಾಶ್, ಡಿ.ಎಸ್. ಹರ್ಷಕುಮಾರ್, ವಿಮಲಾ ರಂಗಯ್ಯ, ಸತೀಶ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ದುರ್ಗಾದಾಸ್ ಮುಲ್ಲಾರ, ಹಿಮ್ಮತ್ ಕೆ.ಸಿ., ಮಹಾಲಿಂಗೇಶ್ವರ ಶರ್ಮ, ಪ್ರವೀಣ್ ಮುಂಡೋಡಿ, ಕೆ.ಎಸ್.ರಾಮಚಂದ್ರ, ರಮಾನಂದ ಎಣ್ಣೆಮಜಲು, ಎಸ್.ಕೆ.ಗೋಪಾಲಕೃಷ್ಣ, ಪಂಡಿ ಸೂರಪ್ಪ ಗೌಡ ವಿನೂಪ್ ಮಲ್ಲಾರ ಮತ್ತಿತರರು ಉಪಸ್ಥಿತರಿದ್ದರು.







