ಮಂಗಳೂರು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಮಂಗಳೂರು, ಮಾ.18: ಮಂಗಳೂರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಮುತ್ತುಶೆಟ್ಟಿ ಚುನಾಯಿತರಾಗಿದ್ದಾರೆ.
ಬೈಕಂಪಾಡಿಯ ಎಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮೋದ್ ಕುಮಾರ್ ಮತ್ತು ಮುತ್ತುಶೆಟ್ಟಿ ತಲಾ 10 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣರಾಜ ಹೆಗ್ಡೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಜನಿ ದುಗ್ಗಣ್ಣ ತಲಾ 7 ಮತಗಳನ್ನು ಪಡೆದು ನಿರೀಕ್ಷೆಯಂತೆ ಸೋಲೊಪ್ಪಿಕೊಂಡರು.
ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 7 ಸದಸ್ಯರು ಗೆಲುವು ಸಾಧಿಸಿದ್ದರು. ಸರಕಾರವು ಮೂವರನ್ನು ನಾಮನಿರ್ದೇಶನ ಮಾಡಿತ್ತು. ಹಾಗಾಗಿ ಕಾಂಗ್ರೆಸ್ 10 ಮತಗಳನ್ನು ಪಡೆದರೆ ಬಿಜೆಪಿ 7 ಮತಗಳಿಗೆ ತೃಪ್ತಿ ಪಡಬೇಕಾಯಿತು.
ಮಾಜಿ ಶಾಸಕ ದಿ. ಕೆ.ಸೋಮಪ್ಪ ಸುವರ್ಣರ ಪುತ್ರನಾಗಿರುವ ಪ್ರಮೋದ್ ಕುಮಾರ್ ಮುಲ್ಕಿ 1-ಕೃಷಿಕ ಮತದಾರರ ಕ್ಷೇತ್ರದಿಂದ 2ನೆ ಬಾರಿಗೆ ಆಯ್ಕೆಯಾಗಿದ್ದರು. ಅದಲ್ಲದೆ ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಮುತ್ತುಶೆಟ್ಟಿ ಕೋಟೆಕಾರ್ ಕೃಷಿಕ ಮತದಾರರ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶಾಸಕ ಅಭಯಚಂದ್ರ ಜೈನ್, ಮೋನಪ್ಪ ಶೆಟ್ಟಿ ಎಕ್ಕಾರು, ಶಾಲೆಟ್ ಪಿಂಟೋ ಮತ್ತಿತರರು ಅಭಿನಂದಿಸಿ ಮಾತನಾಡಿದರು.ಮಂಗಳೂರು ತಹಶೀಲ್ದಾರ್ ಮಹಾದೇವಯ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.







