ನನ್ನ ಟೆಲಿಪೋನ್ ಕದ್ದಾಲಿಕೆ: ಡಿಕೆಶಿ
.jpg)
ಬೆಂಗಳೂರು, ಮಾ. 18: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹೊಸದೇನಲ್ಲ. ಆದರೆ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಸಲ್ಲ ಎಂದು ಆಕ್ಷೇಪಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ತಮ್ಮ ಟೆಲಿಪೋನ್ ಸಂಭಾಷಣೆಯನ್ನು ಕದ್ದಾಲಿಸಲಾಗುತ್ತಿದೆ ಎಂಬ ಸಂಶಯವಿದೆ ಎಂದು ಆರೋಪ ಮಾಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರನ್ನು ಗುರಿಯನ್ನಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಲ್ಲ ಎಂದು ಟೀಕಿಸಿದರು.
ಐಟಿ ಅಧಿಕಾರಿಗಳಿಗೆ ದಿಢೀರ್ ದಾಳಿ ನಡೆಸುವ ಅಧಿಕಾರವಿದೆ. ಹಿಂದೆ ತನ್ನ ನಿವಾಸದ ಮೇಲೂ ದಾಳಿ ನಡೆಸಿದ್ದರು. ಅವರ ಕರ್ತವ್ಯದ ಬಗ್ಗೆ ನನಗೆ ಅರಿವಿದೆ. ಯಾವುದೇ ಸಂದರ್ಭದಲ್ಲಿ ತಾನು ಐಟಿ ದಾಳಿಯ ಬಗ್ಗೆ ಹೆದರುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ತಿರುಗೇಟು ನೀಡಿದರು.
ಮೇಲ್ಮನೆ ಸದಸ್ಯ ಕೆ.ಗೋವಿಂದರಾಜು ಅವರ ನಿವಾಸದಲ್ಲಿ ಐಟಿ ದಾಳಿ ಹಿನ್ನೆಲೆಯಲ್ಲಿ ತನಗೂ ನೋಟಿಸ್ ಬಂದಿತ್ತು. ಅದಕ್ಕೆ ಈಗಾಗಲೇ ಉತ್ತರ ನೀಡಿದ್ದೇನೆ ಎಂದ ಅವರು, ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಿಯೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ಆ ಹುದ್ದೆ ಬೇಕೆಂದು ತಾನು ಯಾರಿಗೂ ಅರ್ಜಿ ನೀಡಿಲ್ಲ ಎಂದ ಅವರು, ಒಕ್ಕಲಿಗರ ಸಂಘದಲ್ಲಿನ ಬಿಕ್ಕಟ್ಟು ಬಗೆಹರಿಸಲು ಸಮುದಾಯದ ಮುಖಂಡರೆಲ್ಲ ಸೇರಿ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ(ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ನಾಗರಾಜು ರಾಜೀನಾಮೆ ನೀಡಿದ್ದಾರೆ. ಆದರೆ, ಕೆಎಂಎಫ್ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಕೋರಿದ್ದಾರೆ ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.







